ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಹತ್ವದ ಚರ್ಚೆ ನಡೆಸಿದ್ದಾರೆ.
ಆದರೆ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ನಡೆದ ಮಹತ್ವದ ಚರ್ಚೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಾಯಕರ ನಡುವೆ ಸಮಾಲೋಚನೆ ನಡೆದಿದೆ ಎಂದು ಹೇಳಲಾಗಿದೆ.
ಬಿ.ಎಸ್.ವೈ.ಗೆ ಮುಖ್ಯಮಂತ್ರಿ ಹುದ್ದೆ ಬದಲು ಬೇರೆ ಉನ್ನತ ಸ್ಥಾನದ ಆಫರ್ ನೀಡಲಾಗಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಕೇಂದ್ರ ಸಚಿವ ಸ್ಥಾನವನ್ನು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ನೀಡಲಾಗುವುದು. ಯಡಿಯೂರಪ್ಪ ಅವರಿಗೆ ಸಿಎಂ ಬದಲು ಉನ್ನತ ಸ್ಥಾನದ ಆಫರ್ ನೀಡಲಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ತಮ್ಮ ಅಭಿಪ್ರಾಯ ತಿಳಿಸುವಂತೆ ಯಡಿಯೂರಪ್ಪ ಅವರಿಗೆ ವರಿಷ್ಠರು ಹೇಳಿದ್ದು, ನಿರ್ಧಾರ ತಿಳಿಸಲು ಟೈಮ್ ಕೊಟ್ಟಿದ್ದಾರೆ. ಹೀಗಾಗಿ ಅಮಿತ್ ಶಾ ನಿವಾಸದಿಂದ ಹೊರಬಂದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡದೇ ಕರ್ನಾಟಕ ಭವನಕ್ಕೆ ತೆರಳಿದ್ದಾರೆ. ನಂತರ ನಾಯಕತ್ವ ಬದಲಾವಣೆ ಕುರಿತಾಗಿ ಚರ್ಚೆ ನಡೆದಿದೆ ಎಂಬುದು ಭಾರೀ ಸುದ್ದಿಯಾಗುತ್ತಿದ್ದಂತೆ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಮಾತನಾಡಿದ್ದಾರೆ.
ವರಿಷ್ಠರೊಂದಿಗೆ ನಡೆದ ಸಭೆ ನನಗೆ ಸಂತೋಷ, ಸಮಾಧಾನ ತಂದಿದೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರಿಂದ ಸಿಹಿಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ. ಸಂಪುಟ ವಿಸ್ತರಣೆ, ಪುನಾರಚನೆ ವಿಚಾರವಾಗಿ ಸ್ಪಷ್ಟನೆ ನೀಡದೇ ವರಿಷ್ಠರಿಂದ ಗುಡ್ ನ್ಯೂಸ್ ಸಿಗಲಿದೆ ಎಂದು ಸಿಎಂ ತಿಳಿಸಿದ್ದಾರೆ. ಹೀಗಿದ್ದರೂ, ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.