ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ರೋಹಿತಾಶ್ ಇಂಡೋ-ಪಾಕಿಸ್ತಾನ ಗಡಿ ಔಟ್ ಪೋಸ್ಟ್ ಗೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಕಾವಲು ಕಾಯುತ್ತಿರುವ ಬಿಎಸ್ಎಫ್ ಸಿಬ್ಬಂದಿಯನ್ನು ಭೇಟಿಯಾಗಿದ್ದಾರೆ. ಅವರು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಸಿಬ್ಬಂದಿ ನಡೆಸುವ ರಾತ್ರಿ ಗಸ್ತು ತಿರುಗುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಅಲ್ಲದೇ ಅವರೊಂದಿಗೆ ಒಂದು ರಾತ್ರಿ ಕಳೆಯಲಿದ್ದಾರೆ.
ರೋಹಿತಾಶ್ ಗಡಿ ಪೋಸ್ಟ್ ಗೆ ಭೇಟಿ ನೀಡಿದ ನಂತರ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ನಾನು ಮತ್ತು ಭಾರತದಲ್ಲಿ 130 ಜನರು ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುತ್ತದೆ. ಏಕೆಂದರೆ ನಮಗೆ ದೇಶದ ಗಡಿಯನ್ನು ಕಾವಲು ಕಾಯುವ ಸೈನಿಕರ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ,
ಆಯುಷ್ಮಾನ್ ಭಾರತ್ ಯೋಜನೆಯನ್ನು ಸಿಎಪಿಎಫ್‌ಗೆ ವಿಸ್ತರಿಸುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ಸಿಎಪಿಎಫ್ ಯೋಧರು ಮತ್ತು ಅವರ ಕುಟುಂಬಗಳಿಗೆ ಪ್ರತ್ಯೇಕ ಆಯುಷ್ಮಾನ್ ಕಾರ್ಡ್ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಯೋಧರು ಮತ್ತು ಅವರ ಕುಟುಂಬದವರು ಸುಲಭವಾಗಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ, ಬಿಎಸ್‌ಎಫ್ ಯೋಧರೊಂದಿಗೆ ಅಮಿತ್ ಶಾ ಭೋಜನ ಸವಿದರು.
ರಾಜಸ್ಥಾನ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟದ ನಡುವೆಯೇ ಶಾ ಭೇಟಿ?
ಬಿಜೆಪಿ ರಾಜ್ಯ ಘಟಕದಲ್ಲಿ ಗುಂಪುಗಾರಿಕೆ ಸುದ್ದಿ ಮಾಡುತ್ತಿರುವಾಗಲೇ ಗೃಹ ಸಚಿವರ ರಾಜಸ್ಥಾನ ಭೇಟಿ ಮಹತ್ವ ಪಡೆದುಕೊಂಡಿದೆ. ಕಳೆದ ವಾರ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಶಕ್ತಿ ಪ್ರದರ್ಶನವನ್ನು ನಡೆಸಿದ್ದಾರೆ. ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ COVID-19 ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ಅಲ್ಲದೇ, ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ವಸುಂಧರಾ ರಾಜೇ ಮತ್ತು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ನಡುವೆ ಘರ್ಷಣೆ ಇದೆ ಎಂದು ವರದಿಯಾಗಿದೆ. ಭಾನುವಾರ ಶಾ ಜೈಪುರಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರೊಂದಿಗೆ ಅವರು ವಸುಂಧರಾ ರಾಜೇ ಮತ್ತು ಪುನಿಯಾ ನಡುವಿನ ಬಿಕ್ಕಟ್ಟು ಶಮನಗೊಳಿಸಲಿದ್ದಾರೆ.