ಚೆನ್ನೈ: ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತಕ್ಕೆ ತರಲು ಕಾರ್ಯತಂತ್ರ ರೂಪಿಸಿದ ಕೇಂದ್ರ ಗೃಹಸಚಿವ ಬಿಜೆಪಿ ಚುನಾವಣೆ ಚಾಣಕ್ಯ ಖ್ಯಾತಿಯ ಅಮಿತ್ ಶಾ ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
ತಮ್ಮ ಭೇಟಿಯ ಸಂದರ್ಭದಲ್ಲಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಡಿಎಂಕೆಯಲ್ಲಿ ಸೈಲೆಂಟ್ ಆಗಿರುವ ಅಳಗಿರಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳು ಉಳಿದಿದ್ದು, ಈ ಅವಧಿಯಲ್ಲಿ ಬಿಜೆಪಿ ಭದ್ರವಾಗಿ ನೆಲೆಕಂಡುಕೊಳ್ಳಲು ಕಾರ್ಯತಂತ್ರ ರೂಪಿಸಿದೆ. ಕಾಂಗ್ರೆಸ್ ನಾಯಕಿ, ನಟಿ ಖುಷ್ಬೂ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇವರೊಂದಿಗೆ ರಜನಿಕಾಂತ್ ಹಾಗೂ ಅಳಗಿರಿ ಅವರ ಬೆಂಬಲ ಪಡೆಯುವ ಬಗ್ಗೆ ಅಮಿತ್ ಶಾ ಇಂದು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಸುಮಾರು ಮೂರು ದಶಕಗಳ ನಂತರ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದೆ ತಮಿಳುನಾಡಿನಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಅಮಿತ್ ಶಾ ಇಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಂತರ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ತಮಿಳುನಾಡಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಲವು ನಾಯಕರ ಬೆಂಬಲ ಕೋರಲಿದ್ದಾರೆ ಎನ್ನಲಾಗಿದೆ.