ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರತಿಷ್ಠೆಯನ್ನು ವಿಶ್ವದಲ್ಲಿ ಪುನರ್ ಸ್ಥಾಪಿಸಿದೆ. ಭಾರತದ ಕೀರ್ತಿಪತಾಕೆ ಈಗ ವಿಶ್ವದಾದ್ಯಂತ ಹಾರಾಡುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಶನಿವಾರದಂದು ದಿಯುನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ 130 ಕೋಟಿ ಜನತೆ ಕೋವಿಡ್ 19 ನ ಎರಡೂ ಲಸಿಕೆಗಳನ್ನು ಸ್ವೀಕರಿಸಿದ್ದು, ಹಲವು ರಾಷ್ಟ್ರಗಳ ನಾಯಕರು ಇದಕ್ಕಾಗಿ ಯಾವ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ್ದರು ಎಂದಿದ್ದಾರೆ.
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಾದ್ಯಂತ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯುಂಟಾದಾಗ ಕೇವಲ 45 ದಿನಗಳಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಳ ಮಾಡಲಾಯಿತು ಎಂದು ಅಮಿತ್ ಶಾ ತಿಳಿಸಿದರು.