ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮೊದಲು ಈಶ್ವರ ಮಂಗಲಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ನಂತರ ವಿವೇಕಾನಂದ ಕಾಲೇಜು ಮೈದಾನದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಂಪ್ಕೋ ಕಾರ್ಯಕ್ರಮ, ಪುತ್ತೂರಿನ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸುವರು.
ನಂತರ ಮಂಗಳೂರಿನಲ್ಲಿ ಪಕ್ಷದ ಮುಖಂಡರ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಮಂಗಳೂರು ನಗರ ಮತ್ತು ಪುತ್ತೂರು ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪುತ್ತೂರಿನ ಕಾರ್ಯಕ್ರಮಕ್ಕೆ ಎಡಿಜಿಪಿ ಚಂದ್ರಗುಪ್ತ ಮಂಗಳೂರಿನ ಕಾರ್ಯಕ್ರಮಕ್ಕೆ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
11 ಕೆ.ಎಸ್.ಆರ್.ಪಿ. ತುಕಡಿ, 1000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳನ್ನು ಕರೆಸಲಾಗಿದೆ ಎಂದು ಕಾನೂನು ವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗಜಾನನ ಶಾಲೆಯ ಹೆಲಿಪ್ಯಾಡ್ ಗೆ ಅಮಿತ್ ಶಾ ಆಗಮಿಸಲಿದ್ದಾರೆ. ರಸ್ತೆ ಮಾರ್ಗವಾಗಿ ಹನುಮಗಿರಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಂತರ ಭಾರತ ಮಾತಾ ಮಂದಿರ ಉದ್ಘಾಟಿಸಲಿದ್ದಾರೆ. ಹನುಮಗಿರಿಯಿಂದ ಪುತ್ತೂರಿನವರೆಗೂ ಪೋಲಿಸ್ ಹೈ ಅಲರ್ಟ್ ಕೈಗೊಳ್ಳಲಾಗಿದೆ.