ಬೆಳಗಾವಿ: ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿ ಅವರ ಕೈ ಬಲಪಡಿಸೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯದಲ್ಲಿ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಜಮ್ಮು ಕಾಶ್ಮೀರದ 370ನೇ ವಿಧಿ ತೆಗೆದು ಹಾಕಿದ್ದು ಮೋದಿ ಸರ್ಕಾರ. ಈ ಮೂಲಕ ಕಾಶ್ಮೀರ ಭಾರತದ್ದು ಎಂದು ಸಾಬೀತುಪಡಿಸಿದ್ದೇವೆ. 2007 ರಲ್ಲಿ ಗೋವಾದಲ್ಲಿ ಸೋನಿಯಾ ಗಾಂಧಿ ಭಾಷಣ ಮಾಡಿ ಕರ್ನಾಟಕಕ್ಕೆ ಮಹದಾಯಿ ನೀರು ನೀಡುವುದಿಲ್ಲ ಎಂದು ಹೇಳಿದ್ದರು. ಈ ಮೂಲಕ ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷ ದ್ರೋಹ ಬಗೆದಿತ್ತು. ಆದರೆ, ಬಿಜೆಪಿ ಎರಡು ರಾಜ್ಯಗಳ ನಡುವೆ ಸಮನ್ವಯ ಸಾಧಿಸಿದೆ ಮಹದಾಯಿ ನದಿಗೆ ನೀರು ಹರಿಸಿ ಕರ್ನಾಟಕ ರೈತರಿಗೆ ಅನುಕೂಲ ಕಲ್ಪಿಸಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ ನವರಿಗೆ ನಾನು ಪ್ರಶ್ನೆ ಮಾಡುತ್ತೇನೆ. ರಾಜ್ಯದ ಜನರಿಗೆ ಎರಡು ಪಕ್ಷಗಳ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಕುಟುಂಬ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿ ಹೈಕಮಾಂಡ್ ಗೆ ಕೆಪಿಸಿಸಿ ಎಟಿಎಂ ಆಗಿತ್ತು. ಬಿಜೆಪಿಯಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಎಲ್ಲಾ ಸಮುದಾಯಗಳ ಅಭಿವೃದ್ಧಿಯಾಗುತ್ತಿದೆ. ಬಡವರು, ದಿನದಲಿತರು, ಮಹಿಳೆಯರು, ರೈತರು, ಯುವಕರು ಸೇರಿದಂತೆ ಎಲ್ಲರ ಅಭಿವೃದ್ಧಿ ಮಾಡಲಾಗುತ್ತಿದೆ. 3 ಕೋಟಿ ಮನೆ, 10 ಕೋಟಿ ಜನರಿಗೆ ಶೌಚಾಲಯ ನಿರ್ಮಾಣ, ಕೋವಿಡ್ ವೇಳೆ ಬಡವರಿಗೆ ಉಚಿತವಾಗಿ 5 ಕೆಜಿ ಅಕ್ಕಿ ವಿತರಣೆ, 7 ಕೋಟಿ ಜನ ಆಯುಷ್ಮಾನ್ ಯೋಜನೆ ಲಾಭ ಪಡೆದಿದ್ದಾರೆ ಎಂದು ಹೇಳಿದ್ದಾರೆ.