alex Certify BIG NEWS: ನಕ್ಸಲ್ ನಿಗ್ರಹಕ್ಕೆ ಗಡುವು, ಮಾವೋವಾದಿ ಹಿಂಸಾಚಾರ ಕೊನೆಗೊಳಿಸಲು 1 ವರ್ಷ ಕಾಲಮಿತಿ; ಸಿಎಂಗಳೊಂದಿಗಿನ ಸಭೆಯಲ್ಲಿ ಅಮಿತ್ ಶಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕ್ಸಲ್ ನಿಗ್ರಹಕ್ಕೆ ಗಡುವು, ಮಾವೋವಾದಿ ಹಿಂಸಾಚಾರ ಕೊನೆಗೊಳಿಸಲು 1 ವರ್ಷ ಕಾಲಮಿತಿ; ಸಿಎಂಗಳೊಂದಿಗಿನ ಸಭೆಯಲ್ಲಿ ಅಮಿತ್ ಶಾ

ನವದೆಹಲಿ: ಮಾವೋವಾದಿ ಗುಂಪುಗಳ ವಿರುದ್ಧದ ಹೋರಾಟ ಈಗ ಅಂತಿಮ ಹಂತದಲ್ಲಿದ್ದು ಅದನ್ನು ಕೊನೆಗೊಳಿಸಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾವೋವಾದ ಪೀಡಿತ ರಾಜ್ಯಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಕೊನೆಗೊಳಿಸುವ ಪ್ರಯತ್ನದ ಕುರಿತಾಗಿ ಅಮಿತ್ ಶಾ ಅವರು ಮಾವೋವಾದಿ ದಂಗೆ ಎದುರಿಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಒಂದು ವರ್ಷದೊಳಗೆ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.

ಮಾವೋವಾದಿ ಬಂಡುಕೋರ ಗುಂಪುಗಳಿಗೆ ಹಣದ ಹರಿವನ್ನು ಕಟ್ಟಿಹಾಕಲು ಜಂಟಿ ಕಾರ್ಯತಂತ್ರ ಇರಬೇಕು ಎಂದು ಒಡಿಶಾ, ತೆಲಂಗಾಣ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮಾವೋವಾದಿ ಗುಂಪುಗಳ ವಿರುದ್ಧದ ಹೋರಾಟ ಈಗ ಅಂತಿಮ ಹಂತದಲ್ಲಿದೆ. ಎಡಪಂಥೀಯ ಉಗ್ರಗಾಮಿ ಹಿಂಸಾಚಾರದಿಂದಾಗಿ ಒಂದು ವರ್ಷದಲ್ಲಿ ಸಾವಿನ ಸಂಖ್ಯೆ 200 ಕ್ಕೆ ಇಳಿದಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಿನ ವರ್ಷಕ್ಕೆ ಎಲ್ಲ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿಗಳಾದ ನವೀನ್ ಪಟ್ನಾಯಕ್ (ಒಡಿಶಾ), ಕೆ. ಚಂದ್ರಶೇಖರ್ ರಾವ್(ತೆಲಂಗಾಣ), ನಿತೀಶ್ ಕುಮಾರ್(ಬಿಹಾರ), ಶಿವರಾಜ್ ಸಿಂಗ್ ಚೌಹಾಣ್(ಮಧ್ಯ ಪ್ರದೇಶ), ಉದ್ಧವ್ ಠಾಕ್ರೆ(ಮಹಾರಾಷ್ಟ್ರ) ಮತ್ತು ಹೇಮಂತ್ ಸೊರೆನ್(ಜಾರ್ಖಂಡ್) ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಗಿರಿರಾಜ್ ಸಿಂಗ್, ಅರ್ಜುನ್ ಮುಂಡಾ ಮತ್ತು ನಿತ್ಯಾನಂದ ರೈ ಸಹ ಇದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಭೆಯಲ್ಲಿ ಭಾಗವಹಿಸಲಿಲ್ಲ. ಈ ರಾಜ್ಯಗಳನ್ನು ಸಚಿವರು ಅಥವಾ ಹಿರಿಯ ಅಧಿಕಾರಿಗಳು ಪ್ರತಿನಿಧಿಸಿದ್ದರು

‘ಅವರ ಆದಾಯದ ಮೂಲ ತಟಸ್ಥಗೊಳಿಸಿ’

ಮಾವೋವಾದಿ ಗುಂಪುಗಳ ಆದಾಯ ಮೂಲಗಳನ್ನು ತಟಸ್ಥಗೊಳಿಸುವ ಪ್ರಯತ್ನಗಳು ನಡೆಯಬೇಕು ಎಂದು ಅಮಿತ್ ಶಾ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಒತ್ತಡ, ಹೆಚ್ಚುತ್ತಿರುವ ವೇಗ ಮತ್ತು ಉತ್ತಮ ಸಮನ್ವಯದಿಂದ ಈ ಗುರಿಯನ್ನು ಸಾಧಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ವಿಧಾನಗಳು, ಅವರ ಮುಂಚೂಣಿಯ ಸಂಘಟನೆಗಳ ವಿರುದ್ಧ ಕ್ರಮ, ಭದ್ರತಾ ನಿರ್ವಾತ ತುಂಬುವುದು, ಉಗ್ರರಿಗೆ ಹಣದ ಹರಿವನ್ನು ನಿಲ್ಲಿಸುವುದು, ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ರಾಜ್ಯ ಪೊಲೀಸರ ಸಂಘಟಿತ ಕ್ರಮಗಳ ಬಗ್ಗೆ ಶಾ ಚರ್ಚಿಸಿದರು.

ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ಮತ್ತು ಡಿಜಿಪಿ ಮಟ್ಟದಲ್ಲಿ ನಿಯಮಿತ ಪರಿಶೀಲನಾ ಸಭೆಗಳನ್ನು ನಡೆಸಬೇಕು, ಇದು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅವರು ಸಲಹೆ ನೀಡಿದರಲ್ಲದೇ, ಅಪಾಯವನ್ನು ಅತ್ಯಲ್ಪ ಮಟ್ಟಕ್ಕೆ ಕಡಿಮೆ ಮಾಡಲು ಕೇಂದ್ರ ನಿರೀಕ್ಷಿಸಿದೆ ಎಂದು ಹೇಳಿದರು.

ಹಿಂಸಾಚಾರದ ಘಟನೆಗಳಲ್ಲಿ ದಾಖಲೆ ಕುಸಿತ

2009 ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 2,258 ರಿಂದ 2020 ರಲ್ಲಿ 665 ಕ್ಕೆ ಮಾವೋವಾದಿಗಳ ಹಿಂಸಾಚಾರದ ಘಟನೆಗಳು ಶೇಕಡ 70 ರಷ್ಟು ಕಡಿಮೆಯಾಗಿದೆ. ಮಾವೋವಾದಿಗಳ ಪ್ರಭಾವದಲ್ಲಿರುವ ಪ್ರದೇಶಗಳು 2010 ರಲ್ಲಿ 96 ಜಿಲ್ಲೆಗಳಿದ್ದವು. ಭೌಗೋಳಿಕ ಹರಡುವಿಕೆ 2020 ರಲ್ಲಿ ಕೇವಲ 53 ಕ್ಕೆ ಇಳಿದಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವವನ್ನು ಪ್ರತಿ ಹಂತಕ್ಕೂ ಹರಡಲು ಮತ್ತು ಅಭಿವೃದ್ಧಿಯಾಗದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮಾವೋವಾದಿ ದಂಗೆಯನ್ನು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಹೇಳಿದರು.

ನಾವು ಇಲ್ಲಿಯವರೆಗೆ ಸಾಧಿಸಿದ್ದಕ್ಕೆ ತೃಪ್ತಿ ಪಡುವ ಬದಲು, ಉಳಿದದ್ದನ್ನು ಪಡೆಯಲು ಗುರಿ ಸಾಧಿಸಲು ವೇಗವನ್ನು ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...