ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಶನಿವಾರ RAF ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಅನಾವರಣಗೊಳಿಸಿದ್ದಾರೆ. ಇವು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿದ್ದು, ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.
ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು, ಆಯಾ ರಾಜ್ಯ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಗೃಹಸಚಿವರ ತ್ರಿಭಾಷಾ ಸೂತ್ರವನ್ನು ದಿಕ್ಕರಿಸುವುದು ಕನ್ನಡಕ್ಕೆ, ಕನ್ನಡಿಗರಿಗೆ ಮಾಡಿದ ಅಗೌರವ. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಹಿಂದಿ, ಆಂಗ್ಲಭಾಷೆಯ ನಿಷ್ಟ ಧೋರಣೆಯಲ್ಲಿ ಕನ್ನಡ ಭಾಷೆಯನ್ನು ಅವಗಣನೆ ಮಾಡಿರುವ ಅಮಿತ್ ಶಾ ಅವರ ಧೋರಣೆ ಕನ್ನಡ ವಿರೋಧಿತನವನ್ನು ತೋರಿಸುತ್ತದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ RAF ಘಟಕ ಸ್ಥಾಪನೆಗೆ ಕನ್ನಡದ ನೆಲವನ್ನೆ ಕೊಟ್ಟಿದ್ದು, ಪರಿಜ್ಞಾನವಿಲ್ಲದೆ ಕನ್ನಡದಲ್ಲಿ ಅಡಿಗಲ್ಲು ಫಲಕ ಇಲ್ಲದಿರುವುದು ಅಕ್ಷಮ್ಯ. ಅಮಿತ್ ಶಾ ಅವರು ತ್ರಿಭಾಷಾಸೂತ್ರವನ್ನು ಉಲ್ಲಂಘಿಸಿರುವುದಕ್ಕೆ ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಾಡು-ನುಡಿಯ ಘನತೆಗೆ ಚ್ಯುತಿ ಬಂದಾಗ ಸಹಿಸಿಕೊಳ್ಳುವವರಿಗೆ ಈ ರಾಜ್ಯದ ಆಡಳಿತ ನಡೆಸುವ ಅರ್ಹತೆ ಇಲ್ಲ. ಕೇಂದ್ರದ ಗೃಹಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ ಎಂದು ಟೀಕಿಸಿದ್ದಾರೆ.