
ಬೆಂಗಳೂರು: ನಾಳೆಯಿಂದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಡಿಸೆಂಬರ್ 30 ರಂದು ಬೆಂಗಳೂರಿನಲ್ಲಿ ಸಹಕಾರ ವಲಯದ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ.
ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. 24,000 ಕೋಟಿ ರೂಪಾಯಿ ಸಾಲ ನೀಡುವ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ ನೀಡುವರು. ಇದೇ ಸಂದರ್ಭದಲ್ಲಿ ಯಶಸ್ವಿನಿ ಯೋಜನೆ ಮರು ಚಾಲನೆಗೆ ನೀಡಲಾಗುವುದು. ಈಗಾಗಲೇ 20 ಲಕ್ಷ ಜನರು ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸುವಿಕೆ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ ಭಾಷಣದಲ್ಲಿ ಅಮಿತ್ ಶಾ ಅವರು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಸುಮಾರು 5700 ವಿಎಸ್ಎಸ್ ಗಳಿಗೆ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನ ವಿವರಿಸಲಿದ್ದಾರೆ ಎಂದು ಹೇಳಲಾಗಿದೆ.