‘ಕರ್ನಾಟಕ ವಿಕಾಸಕ್ಕೆ ಡಬಲ್ ಇಂಜಿನ್ ಸರ್ಕಾರಗಳಿವೆ. ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರಗಳಿದ್ದು, ಅಭಿವೃದ್ಧಿಪರ ಕಾರ್ಯನಿರ್ವಹಿಸುತ್ತಿವೆ. ಇದನ್ನು ಸಹಿಸದೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ.’
ಹೀಗೆಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಹಾಯ್ದಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ಜನ ಸೇವಕ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲು 100 ಗ್ರಾಮಗಳಲ್ಲಿ ಮಾತ್ರ ಬ್ರಾಡ್ ಬ್ಯಾಂಡ್ ಸೇವೆ ಇತ್ತು. ಈಗ ಹಳ್ಳಿಹಳ್ಳಿಗೂ ಬ್ರಾಡ್ ಬ್ಯಾಂಡ್ ಸೌಲಭ್ಯ ಕಲ್ಪಿಸಿದ್ದು, 1.30 ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಹೋದರಿಯರು ತ್ರಿವಳಿ ತಲಾಖ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರಧಾನಿ ಮೋದಿಜೀ ತ್ರಿವಳಿ ತಲಾಖ್ ಕಿತ್ತೆಸೆದರು. 2014 ಕ್ಕೆ ಮೊದಲು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು ಎಂದು ದೂರಿದ್ದಾರೆ.
ಮೋದಿ ಸರ್ಕಾರ ಬಂದ ನಂತರ ಪ್ರತಿ ಮನೆಗೆ ಬ್ಯಾಂಕ್ ಖಾತೆ ಮಾಡಲಾಗಿದೆ. ಹೊಗೆ ಮುಕ್ತ ದೇಶಕ್ಕಾಗಿ ಪ್ರತಿಮನೆಗೂ ಸಿಲಿಂಡರ್ ವಿತರಿಸಲಾಗಿದೆ. 13 ಕೋಟಿ ಕುಟುಂಬಗಳಿಗೆ ಸಿಲಿಂಡರ್ ನೀಡಿದ್ದು, ಇದೆಲ್ಲ ಪ್ರಧಾನಿ ಮೋದಿ ಸರ್ಕಾರದ ಸಾಧನೆಯಾಗಿದೆ. ಎಷ್ಟೋ ಮನೆಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಈಗ ವಿದ್ಯುತ್ ಸೌಲಭ್ಯ ಸಿಕ್ಕಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂಪಾಯಿಯವರೆಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದ್ದು, ಆರ್ಥಿಕತೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಆಗಲಿದೆ. 5 ಟ್ರಿಲಿಯನ್ ಆರ್ಥಿಕತೆಯತ್ತ ಮುನ್ನಡೆಯುತ್ತಿದ್ದೇವೆ. 2022ರ ವೇಳೆಗೆ ಪ್ರತಿ ಮನೆಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.