ಬೆಳಗಾವಿ: ಬಿಜೆಪಿ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿರುವ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆ ಉಪ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಬೆಳಗಾವಿ ಮರಾಠಿಗರು, ಕನ್ನಡಿಗರ ಸಮ್ಮಿಲನವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಗೆಲುವು ಸಿಕ್ಕಿದೆ. ಇಂತಹ ಗೆಲುವು ತಂದುಕೊಟ್ಟ ಜನರಿಗೆ ಧನ್ಯವಾದ ಹೇಳಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಸಂಕ್ರಾಂತಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ದಿ. ಸುರೇಶ್ ಅಂಗಡಿಯವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು ಎಂದು ಸ್ಮರಿಸಿದ ಅಮಿತ್ ಶಾ, 2014 ಮತ್ತು 2019 ರಲ್ಲಿ ಅಭೂತಪೂರ್ವ ಗೆಲುವು ತಂದುಕೊಟ್ಟೀದ್ದೀರಿ. ನರೇಂದ್ರ ಮೋದಿ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ್ದೇವೆ. ನೆಹರು ಕಾಲದಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೆ ಇದು ಸಾಧ್ಯವಾಗಲಿಲ್ಲ. ಮೋದಿ ಪ್ರಧಾನಿಯಾದ ನಂತರ ಇದು ಸಾಧ್ಯವಾಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಯ್ತು ಎಂದು ಹೇಳಿದ್ದಾರೆ.
ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಅವರನ್ನು ಸ್ಮರಿಸಿದ ಅಮಿತ್ ಶಾ ಅವರು, ಪ್ರಧಾನಿ ಮೋದಿ ಅವರಿಗೆ ಮತಗಳ ಮೂಲಕ ಜೋಳಿಗೆ ತುಂಬಿಸಿದ್ದೀರಿ. ಪ್ರತಿ ಚುನಾವಣೆಯಲ್ಲಿಯೂ ಜಯ ಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.