ದೇಶದಲ್ಲಿ ‘ಲವ್ ಜಿಹಾದ್’ ವಿವಾದ ಜೋರಾಗಿ ಕೇಳಿಬರುತ್ತಿರುವ ಹೊತ್ತಲ್ಲೇ ತ್ರಿಪುರಾದಲ್ಲಿ ಮುಸ್ಲಿಂ ಯುವತಿಯೊಬ್ಬರು ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದು ಬಳಿಕ ತನ್ನ ಧರ್ಮವನ್ನು ಬದಲಾಯಿಸಿಕೊಂಡಿದ್ದಾರೆ.
ಖೋವೈ ಜಿಲ್ಲೆಯ ತೆಲಿಯಮುರಾ ಉಪವಿಭಾಗದ ಜರಿಲಾಂಗ್‌ಪಾಡಾ ಗ್ರಾಮದ ನಿವಾಸಿ ಜರೀನಾ ಬೇಗಂ (22) ಮತ್ತು ಉತ್ತರ್ ಚೆಬ್ರಿ ಗ್ರಾಮದ 22 ವರ್ಷದ ರಂಜಿತ್ ದೇಬನಾಥ್ ಮೇ 2 ರಂದು ವಿವಾಹವಾದರು. ಮದುವೆಗೆ ಅವರ ಕುಟುಂಬಗಳು ವಿರೋಧಿಸಿದ್ದರಿಂದ ಅವರಿಬ್ಬರೇ ಮದುವೆಯಾಗಿದ್ದರು. ಮದುವೆ ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಮತ್ತು ಸೋನಾಲಿ ದೇಬನಾಥ್ ಎಂದು ತನ್ನ ಹೆಸರು ಬದಲಾಯಿಸಿಕೊಳ್ಳಲು ಮಹಿಳೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು.
ಸೋನಾಲಿ ಅವರ ತಂದೆ ಕೃಷಿಕರಾಗಿದ್ದಾರೆ. ಸೋನಾಲಿ ಆರು ವರ್ಷಗಳ ಹಿಂದೆ ರಂಜಿತ್ ನನ್ನು ಭೇಟಿಯಾದ ವೇಳೆ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಗಿ ಹೇಳಿದರು. ಹಿಂದೂ ಧರ್ಮವನ್ನು ತಾನಾಗಿಯೇ ಅಳವಡಿಸಿಕೊಂಡಿದ್ದೇನೆ ಎಂದು ಸೋನಾಲಿ ಹೇಳಿದರೆ, ಆಕೆ ತಾನಾಗೇ ಹಿಂದೂ ಆಗಲು ನಿರ್ಧರಿಸಿದ್ದಾಳೆ ಎಂದು ರಂಜಿತ್ ಹೇಳಿದರು.
ಏತನ್ಮಧ್ಯೆ ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಮುಖಂಡ ಮಹೇಂದ್ರಪಾಲ್ ಸಿಂಗ್ ಮಾತನಾಡಿ ಸೋನಾಲಿ, ರಂಜಿತ್ ಅವರನ್ನು ವಿವಾಹವಾಗಿ ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಕಲ್ಯಾಣಪುರದ ಘಿಲಾತಲಿಯಲ್ಲಿರುವ ತ್ರಿಪುರೇಶ್ವರಿ ರಾಧಾ ಗಿರಿಧಾರಿ ಶಿವ ದೇವಾಲಯದಲ್ಲಿ ಅವರ ಮದುವೆಗೆ ತಾವೇ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.