ಕೋವಿಡ್-19ನ ಒಮಿಕ್ರಾನ್ ರೂಪಾಂತರಿಯ ಪ್ರಕರಣಗಳು ಜೋರಾಗುತ್ತಿರುವ ನಡುವೆ, ಜನವರಿ 3ರಿಂದ ಎರಡು ವಾರಗಳ ಮಟ್ಟಿಗೆ ಪ್ರಕರಣಗಳ ಆಲಿಕೆಯನ್ನು ದೈಹಿಕವಾಗಿ ನಡೆಸುವ ಬದಲು ವರ್ಚುವಲ್ ಆಗಿ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಕಳೆದ ವರ್ಷದ ಅಕ್ಟೋಬರ್ನಿಂದ ಕೇಸುಗಳ ದೈಹಿಕ ಆಲಿಕೆಗೆ ಸುಪ್ರೀಂ ಕೋರ್ಟ್ ಚಾಲನೆ ಕೊಟ್ಟಿತ್ತು. ಇದಕ್ಕೂ ಮುನ್ನ, ಮಾರ್ಚ್ 2020ರಿಂದ ಕೋವಿಡ್ ಸೋಂಕಿನ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ವರ್ಚುವಲ್ ಆಗಿ ಪ್ರಕರಣಗಳ ಆಲಿಕೆ ಮಾಡುತ್ತಿತ್ತು.
ಈ ಸಂಬಂಧ ಭಾನುವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ಆಡಳಿತ, “ಒಮಿಕ್ರಾನ್ ರೂಪಾಂತರಿ (ಕೋವಿಡ್-19) ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಬಾರ್ ಸದಸ್ಯರು, ಪಾರ್ಟಿಗಳು ಮತ್ತು ಸಂಬಂಧಪಟ್ಟ ಎಲ್ಲರಿಗೂ ತಿಳಿಯಪಡಿಸುವುದೇನೆಂದರೆ, 07.10.2021ರಂದು ಘನವೆತ್ತ ಕೋರ್ಟುಗಳಲ್ಲಿ ದೈಹಿಕ ಆಲಿಕೆ (ಹೈಬ್ರಿಡ್ ಆಯ್ಕೆ ಸೇರಿ) ಸಂಬಂಧ ಹೊರಡಿಸಿದ್ದ ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆ (ಎಸ್ಓಪಿ) ಸದ್ಯದ ಮಟ್ಟಿಗೆ ವಜಾಗೊಳ್ಳಲಿದೆ,” ಎಂದು ತಿಳಿಸಿದ ಆಡಳಿತ, “ಘನವೆತ್ತ ನ್ಯಾಯಾಲಯಗಳ ಮುಂದೆ ಇರುವ ಎಲ್ಲಾ ಆಲಿಕೆಗಳು 03.01.2022ರಿಂದ ಎರಡು ವಾರಗಳ ಮಟ್ಟಿಗೆ ವರ್ಚುವಲ್ ಆಗಿ ಮಾತ್ರವೇ ನಡೆಯಲಿವೆ,” ಎಂದಿದೆ.
ಚಳಿಗಾಲದ ರಜೆಯ ಬಳಿಕ ಪರಮೋಚ್ಛ ನ್ಯಾಯಾಲಯ ಸೋಮವಾರದಿಂದ ಮತ್ತೆ ಆರಂಭವಾಗಲಿದೆ.