ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟದಿಂದಾಗಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಸಿತವಾಗಿದೆ. ಕಳೆದ ಫೆಬ್ರವರಿಯಿಂದ ಇದುವರೆಗೆ ಕೊರೋನಾ ಬಿಕ್ಕಟ್ಟು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ನಾಯಕತ್ವ ವಿಫಲವಾಗಿದೆ. ಇದರಿಂದಾಗಿ ಅವರ ಜನಪ್ರಿಯತೆಯ ಗ್ರಾಫ್ ಕುಸಿತವಾಗಿದೆ ಎಂದು ಭಾರತೀಯ ಮತ್ತು ಅಮೆರಿಕದ ಡೇಟಾ ಇಂಟಲಿಜೆನ್ಸಿ ಸಂಸ್ಥೆಯ ಸಮೀಕ್ಷೆಯಲ್ಲಿ ಗೊತ್ತಾಗಿದೆ.
2014 ರಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಮೋದಿ ಪ್ರಧಾನಿಯಾಗಿ ಅನೇಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿತ್ತು. 2019 ರ ಲೋಕಸಭೆ ಚುನಾವಣೆಯಲ್ಲಿಯೂ ಪ್ರಚಂಡ ಗೆಲುವು ಸಾಧಿಸಿದ್ದ ಅವರು ಅನೇಕ ಮಹತ್ವದ ನಿರ್ಧಾರಗಳಿಂದ ಜನಪ್ರಿಯರಾಗಿದ್ದರು. ಈ ವರ್ಷ ಜನವರಿಯವರೆಗೆ ಎಲ್ಲವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದ ಮೋದಿಯವರಿಗೆ ಫೆಬ್ರವರಿಯ ನಂತರ ಕೊರೋನಾ ಕಠಿಣ ಸವಾಲು ಒಡ್ಡಿದೆ.
ದೇಶದ ಜನಜೀವನದ ಮೇಲೆ ಕೊರೋನಾ ಮಾರಕ ಪರಿಣಾಮ ಉಂಟಾಗಿ ಆರ್ಥಿಕತೆಯ ಮೇಲೆಯೂ ದೊಡ್ಡ ಪೆಟ್ಟು ಬಿದ್ದಿದೆ. ಇಂತಹ ಪರಿಸ್ಥಿತಿ ನಿರ್ವಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎನ್ನುವ ಅಸಮಾಧಾನ ದೇಶದ ಜನರಲ್ಲಿ ಮೂಡಿದೆ. ಈ ಕುರಿತಾದ ಬೆಳವಣಿಗೆಗಳಿಂದ ಮೋದಿಯವರ ಜನಪ್ರಿಯತೆ ತಗ್ಗಿದೆ ಎಂದು ಹೇಳಲಾಗಿದೆ.
2019 ರಿಂದ ಜನಪ್ರಿಯತೆಯ ರೇಟಿಂಗ್ ನಲ್ಲಿ ಮೋದಿ ಮಂಚೂಣಿಯಲ್ಲಿದ್ದರು. ಆದರೆ, ಇತ್ತೀಚೆಗೆ ಅವರ ಜನಪ್ರಿಯತೆ 22 ಪಾಯಿಂಟ್ ಕುಸಿತ ಕಂಡು ಶೇಕಡ 63ಕ್ಕೆ ಇಳಿದಿದೆ. ಕೊರೋನಾ ಬಿಕ್ಕಟ್ಟು ನಿರ್ವಹಿಸುವಲ್ಲಿ ಮೋದಿ ಉತ್ತಮ ಕಾರ್ಯ ಮಾಡಿದ್ದಾರೆ ಎನ್ನುವವರ ಸಂಖ್ಯೆ ಕಡಿಮೆಯಾಗಿದೆ. ಕಳೆದ 7 ವರ್ಷಗಳ ಅವಧಿಯಲ್ಲಿಯೇ ಮೊದಲ ಬಾರಿಗೆಮೋದಿ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.