
ಅಮೆರಿಕದ ಯೂಟ್ಯೂಬರ್ ಆರಿಯೇ ಸ್ಮಿತ್ ತಮ್ಮ ಭಾಷಾ ಕೌಶಲ್ಯದಿಂದ ಜಗತ್ತಿನಾದ್ಯಂತ ಜನರನ್ನು ಪುಳಕಿತಗೊಳಿಸುವಲ್ಲಿ ಸಿದ್ಧಹಸ್ತರು. ’ಶಿಯಾವೋಮ್ಯಾನಿಕ್’ ಎಂದೂ ಕರೆಯಲ್ಪಡುವ ಇವರು ಇತ್ತೀಚೆಗೆ ಕೀನ್ಯಾದ ಮಸಾಯಿ ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಬುಡಕಟ್ಟು ಜನಾಂಗದೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ಮಸಾಯಿ ಭಾಷೆಯಲ್ಲಿ ಮಾತನಾಡುವ ಮೂಲಕ ಆ ಜನರ ಹೃಯದ ಗೆದ್ದಿದ್ದಾರೆ.
ಇದೇ ವೇಳೆ ಬುಡಕಟ್ಟು ಜನಾಂಗದ ಪದ್ಧತಿಗಳನ್ನು, ನಾಮಕರಣ ಶಾಸ್ತ್ರವನ್ನೂ ಸೇರಿ, ತಮ್ಮ ವಿಡಿಯೋದಲ್ಲಿ ಸೆರೆ ಹಿಡಿದು ಆನ್ಲೈನ್‌ನಲ್ಲಿ ಶೇರ್ ಮಾಡಿದ್ದಾರೆ.
ಈ ವೇಳೆ ಮಸಾಯಿ ಯೋಧರೊಂದಿಗೆ ಅವರದ್ದೇ ಭಾಷೆಯಲ್ಲಿ ಮಾತನಾಡುವ ಮೂಲಕ ಸ್ಮಿತ್ ತಮ್ಮ ವೀಕ್ಷಕರ ಗಮನ ಸೆಳೆದಿದ್ದಾರೆ. ತಮ್ಮ ಮಸಾಯಿ ಭೇಟಿಗೂ ತಿಂಗಳ ಮುನ್ನ ಈ ಭಾಷೆಯನ್ನು ಕಲಿತಿದ್ದರು ಸ್ಮಿತ್. ತಮ್ಮದೇ ಭಾಷೆಯನ್ನು ಪರಕೀಯನೊಬ್ಬ ಇಷ್ಟು ಚೆನ್ನಾಗಿ ಮಾತನಾಡವುದುನ್ನು ಕಂಡು ಚಕಿತರಾದ ಗ್ರಾಮಸ್ಥರು ಆತನಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಈ ಸಂದರ್ಭದಲ್ಲಿ, ಬುಡಕಟ್ಟು ಜನಾಂಗದ ದಿನನಿತ್ಯದ ಜೀವನದ ಅನೇಕ ಆಯಾಮಗಳಲ್ಲಿ ಖುದ್ದು ಭಾಗಿಯಾದ ಸ್ಮಿತ್, ಜಾನುವಾರು ಸಾಕಣೆ, ಮೇಕೆ ಚರ್ಮ ಸುಲಿಯುವಿಕೆ, ಬೆಂಕಿ ಹೊತ್ತಿಸುವುದು, ಮಕ್ಕಳಿಗೆ ನಾಮಕರಣ ಮಾಡುವುದು ಸೇರಿದಂತೆ ಅನೇಕ ವಿಚಾರಗಳನ್ನು ತಮ್ಮ ವೀಕ್ಷಕರಿಗೆ ತೋರಿಸಿಕೊಟ್ಟಿದ್ದಾರೆ.
ಇದಕ್ಕೂ ಮುನ್ನ, ಇದೇ ಸ್ಮಿತ್ ಅಮೃತಸರಕ್ಕೆ ಭೇಟಿ ಕೊಟ್ಟಿದ್ದ ವೇಳೆ ಸ್ಥಳೀಯರೊಂದಿಗೆ ಪಂಜಾಬಿ ಭಾಷೆಯಲ್ಲಿ ಸಂವಹನ ನಡೆಸುವ ಮೂಲಕ ಜನರ ಮನಗೆದ್ದಿದ್ದರು. ಈ ವೇಳೆ ಪಂಜಾಬಿಗಳ ಧಾರಾಳತೆಗೆ ಮರುಳಾಗಿದ್ದ ಸ್ಮಿತ್, ಸ್ವರ್ಣ ಮಂದಿರಕ್ಕೆ ಭೇಟಿ ಕೊಟ್ಟು ಅಲ್ಲಿನ ಸಂಪ್ರದಾಯಗಳಲ್ಲಿ ಭಾಗಿಯಾಗಿ, ಲಂಗರ್‌ನಲ್ಲಿ ಆಹಾರ ತಯಾರಿಯಲ್ಲೂ ಭಾಗಿಯಾಗಿದ್ದರು.