
ಬೆಂಗಳೂರು: ರಾಜ್ಯದಲ್ಲಿ ವೃತ್ತಿಪರ ತೆರಿಗೆ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದ್ದು, ವಾರ್ಷಿಕ 2500 ರೂಪಾಯಿ ಸಂಗ್ರಹಿಸಲಾಗುವುದು.
ರಾಜ್ಯದಲ್ಲಿ ವೃತ್ತಿಪರ ತೆರಿಗೆಯನ್ನು ವರ್ಷದ ಒಂದು ತಿಂಗಳು ಮಾತ್ರ 200 ರಿಂದ 300ರೂ. ಸಂಗ್ರಹಿಸಲು ಅವಕಾಶ ಕಲ್ಪಿಸುವ ಕರ್ನಾಟಕ ವೃತ್ತಿ, ಕಸುಬು, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ತಿದ್ದುಪಡಿ ವಿಧೇಯಕ -2025 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಇದುವರೆಗೆ ರಾಜ್ಯದಲ್ಲಿ ಮಾಸಿಕ 25,000 ರೂ. ಗಿಂತ ಹೆಚ್ಚು ಆದಾಯ ಗಳಿಸುವ(ಉದ್ಯೋಗ, ವೃತ್ತಿ, ವ್ಯಾಪಾರ) ವ್ಯಕ್ತಿಗಳು ಮಾಸಿಕ 200 ರೂಪಾಯಿಯಂತೆ ವಾರ್ಷಿಕ 2400 ರೂ. ವೃತ್ತಿ ತೆರಿಗೆ ಪಾವತಿಸಬೇಕಿತ್ತು. ಆದರೆ, ವೃತ್ತಿ ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಗರಿಷ್ಠ 2500 ರೂ. ವೃತ್ತಿ ತೆರಿಗೆ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಇದೀಗ ವರ್ಷದ 12 ತಿಂಗಳಲ್ಲಿ 11 ತಿಂಗಳು ತಲಾ 200 ರೂಪಾಯಿ, ಫೆಬ್ರವರಿ ಒಂದು ತಿಂಗಳು 300 ರೂ. ಸೇರಿ ವಾರ್ಷಿಕ 2500 ರೂಪಾಯಿ ಸಂಗ್ರಹಿಸಲು ಅವಕಾಶ ಕಲ್ಪಿಸಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ.