ಕೋಲಾರ: ಆಂಬುಲೆನ್ಸ್ ನಲ್ಲೇ ಗರ್ಭಿಣಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮಾಲೂರು ತಾಲೂಕಿನ ಕನವನಹಳ್ಳಿಯ ಸುಜಾತಾ ಅವರಿಗೆ ಸೋಮವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರ ಪತಿ 108 ಆಂಬುಲೆನ್ಸ್ ಗೆ ಕರೆ ಮಾಡಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದು, ಹೆರಿಗೆ ನೋವು ಜಾಸ್ತಿಯಾಗಿದೆ. ವಕ್ಕಲೇರಿ ಸಮೀಪ ಆಂಬುಲೆನ್ಸ್ ತೆರಳುವ ವೇಳೆ ಹೆರಿಗೆ ನೋವು ಜಾಸ್ತಿಯಾಗಿದ್ದು, ಆಂಬುಲೆನ್ಸ್ ಸಿಬ್ಬಂದಿ ಹರೀಶ್ ಮತ್ತು ಚಾಲಕ ಕರಿಯಪ್ಪ ಸುರಕ್ಷಿತವಾಗಿ ಆಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸುವ ಮೂಲಕ ಸಮಯ ಪ್ರಜ್ಞೆ ತೋರಿದ್ದಾರೆ. ಸಾರ್ವಜನಿಕರಿಂದ ಇವರ ಕರ್ತವ್ಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತವಾಗಿದೆ. ಸುಜಾತಾ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳು ಹಾಗೂ ಬಾಣಂತಿಯನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.