ಒಡಿಶಾದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಒಬ್ಬ ಆಸ್ಪತ್ರೆಗೆ ಹೋಗುತ್ತಿರುವಾಗ ರೋಗಿಯೊಂದಿಗೆ ಮದ್ಯಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಕುಡಿಯುವುದನ್ನು ಮತ್ತು ರೋಗಿಯೊಂದಿಗೆ ಮದ್ಯ ಹಂಚಿಕೊಳ್ಳುವುದನ್ನು ಕಾಣಬಹುದು.
ಗಾಯಗೊಂಡ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಆಂಬುಲೆನ್ಸ್ ನಿಲ್ಲಿಸಿದ ಚಾಲಕ ರೋಗಿಗೆ ಮದ್ಯ ಕೊಡುತ್ತಾನೆ. ತಾನೂ ಕುಡಿಯುತ್ತಾನೆ. ಇಬ್ಬರೂ ಆಂಬುಲೆನ್ಸ್ ನಿಲ್ಲಿಸಿ ಮದ್ಯಪಾನ ಮಾಡಿದ ನಂತರ ಅಲ್ಲಿಂದ ತೆರಳುತ್ತಾರೆ.
ವ್ಯಕ್ತಿ ತನ್ನ ವಾಹನವನ್ನು ಟಿರ್ಟೋಲ್ ಪ್ರದೇಶದ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಎರಡು ಗ್ಲಾಸ್ ಗೆ ಪಾನೀಯ ಸುರಿದಿದ್ದಾನೆ. ಆಂಬ್ಯುಲೆನ್ಸ್ ಡ್ರೈವರ್ ತನ್ನ ಪಾನೀಯವನ್ನು ಒಂದೇ ಬಾರಿಗೆ ಸೇವಿಸುವುದನ್ನು ಕಾಣಬಹುದು, ಆದರೆ ರೋಗಿಯು ಸ್ಟ್ರೆಚರ್ ಮೇಲೆ ಮಲಗಿ ಪಾನೀಯ ಹೀರಿದ್ದಾನೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ನಂತರ ಸೋಮವಾರ ಘಟನೆ ಬೆಳಕಿಗೆ ಬಂದಿದೆ. ಆಂಬ್ಯುಲೆನ್ಸ್ ಚಾಲಕನನ್ನು ಕೇಳಿದಾಗ, ರೋಗಿಯೇ ಮದ್ಯ ಕೇಳಿದ್ದಾಗಿ ತಿಳಿಸಿದ್ದಾನೆ. ಆಂಬ್ಯುಲೆನ್ಸ್ ನಲ್ಲಿ ಮಹಿಳೆ ಮತ್ತು ಮಗು ಕೂಡ ಇದ್ದರು.
ಜಗತ್‌ಸಿಂಗ್‌ಪುರ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ(ಸಿಡಿಎಂಒ) ಡಾ.ಕ್ಷೇತ್ರಬಸಿ ದಾಶ್ ಅವರು, ಇದು ಖಾಸಗಿ ಆಂಬ್ಯುಲೆನ್ಸ್ ಆಗಿರುವುದರಿಂದ ಸಂಬಂಧಿಸಿದ ಆರ್‌ಟಿಒ ಮತ್ತು ಪೊಲೀಸ್ ಠಾಣೆ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಏತನ್ಮಧ್ಯೆ, ಘಟನೆಯ ಬಗ್ಗೆ ತನಿಖೆ ನಡೆಸಿ ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಕುಡಿದು ವಾಹನ ಚಾಲನೆ ಮಾಡುವುದು ಸಂಚಾರ ಅಪರಾಧ ಎಂದು ಪರಿಗಣಿಸಲಾಗಿದೆ. ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಮತ್ತು ಎಫ್‌ಐಆರ್ ದಾಖಲಿಸಿದರೆ ಮಾತ್ರ ತನಿಖೆ ನಡೆಸಲಾಗುವುದು ಎಂದು ತಿರ್ತೋಲ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ ಪೆಕ್ಟರ್ ಜುಗಲ್ ಕಿಶೋರ್ ದಾಸ್ ಹೇಳಿದ್ದಾರೆ.