ಬಡವರ ಜೊತೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯ ವರ್ತನೆ ತೋರಿಸುತ್ತಿರುವ ಹಲವಾರು ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದ್ದು, ಅಂಬುಲೆನ್ಸ್ ನೀಡಲು ನಿರಾಕರಿಸಿದ್ದಕ್ಕೆ ದಂಪತಿ, ತಮ್ಮ ಮಗುವಿನ ಶವವನ್ನು ಬೈಕಿನಲ್ಲಿ ಕೊಂಡೊಯ್ದಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಈ ಘಟನೆ ನಡೆದಿದ್ದು, ಮುಂಚಿಗಪಟ್ಟುವಿನ ಕುಮದು ಗ್ರಾಮದಲ್ಲಿ ಮಹೇಶ್ವರಿ ಎಂಬವರಿಗೆ ಫೆಬ್ರವರಿ ಎರಡರಂದು ಮಗು ಜನಿಸಿತ್ತು. ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನ ಕೆಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಫೆಬ್ರವರಿ 16ರಂದು ಮೃತಪಟ್ಟಿದ್ದು, ಶವವನ್ನು ಕೊಂಡೊಯ್ಯಲು ಆಂಬುಲೆನ್ಸ್ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ವಿಧಿ ಇಲ್ಲದೆ ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಮಗುವಿನ ಶವದೊಂದಿಗೆ 120 ಕಿ.ಮೀ. ದೂರದ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ.
ಇನ್ನು ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಕೆಜಿ ಆಸ್ಪತ್ರೆ ಸೂಪರಿಂಟೆಂಡೆಂಟ್, ನಾವು ಅಂಬುಲೆನ್ಸ್ ವ್ಯವಸ್ಥೆ ಮಾಡುವಷ್ಟರಲ್ಲಿ ದಂಪತಿ ಮಗುವಿನ ಶವ ತೆಗೆದುಕೊಂಡು ಹೋಗಿದ್ದಾರೆ. ಆ ಬಳಿಕ ಅವರನ್ನು ಪದೇರು ಗ್ರಾಮದ ಬಳಿ ಪತ್ತೆ ಹಚ್ಚಿ ಅಂಬುಲೆನ್ಸ್ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.