ಬೆಳಗಾವಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದ್ದು, ಎರಡು ಗುಂಪುಗಳ ನಡಿವೆ ಗಲಾಟೆ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ನಡೆದಿದೆ.
ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಅಂಬೇಡ್ಕರ್ ಭಾವಚಿತ್ರವಿಟ್ಟು ಗೌರವಿಸಲಾಗಿತ್ತು. ಬಳಿಕ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಿಡಿಗೇಡಿಗಳ ಗುಂಪು ಕೆಳಗೆ ಬೀಳಿಸಿ ಅಪಮಾನ ಮಾಡಿದೆ.
ಇದನ್ನು ಕಂಡ ಕಾರ್ಯಕ್ರಮ ಆಯೋಜಕರು ಕಿಡಿಗೇಡಿಗಳ ಗುಂಪನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಮಹಿಳೆಯರು, ಮಕ್ಕಳು ಹಾಗೂ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ.
ಘಟನೆ ಖಂಡಿಸಿ ಸದಲಗಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಮಹಿಳೆಯರು ಹಾಗೂ ಜನರು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿದ್ದು, ಸದ್ಯ ಪ್ರತಿಭಟನೆ ಹಿಂಪಡೆಯಲಾಗಿದೆ.