ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೋ ವಿವಾದಕ್ಕೆ ಹೈಕೋರ್ಟ್ ಅಂತ್ಯಹಾಡಿದೆ. ಕೋರ್ಟ್ ನ ಅಧಿಕೃತ ಸಮಾರಂಭಗಳಲ್ಲಿ ಫೋಟೋ ಇಡುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ಫೋಟೋ ಇಡಲು ನ್ಯಾಯಮೂರ್ತಿಗಳ ಪೂರ್ಣ ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.
ಅಂಬೇಡ್ಕರ್ ಅವರ ಫೋಟೋ ಕೋರ್ಟ್ ಅಧಿಕೃತ ಸಮಾರಂಭಗಳಲ್ಲಿ ಇಡಲಾಗುತ್ತದೆ. ಜನವರಿ 26 ಗಣರಾಜ್ಯೋತ್ಸವ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ನವೆಂಬರ್ 26 ಸಂವಿಧಾನ ದಿನದಂದು ಅಂಬೇಡ್ಕರ್ ಅವರ ಫೋಟೋ ಇಡಲಾಗುವುದು. ಜಿಲ್ಲಾ ಮತ್ತು ತಾಲೂಕು ಕೋರ್ಟುಗಳಿಗೆ ಇದರ ಬಗ್ಗೆ ಸೂಚನೆ ನೀಡಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಡಿ.ಜಿ. ಶಿವಶಂಕರೇಗೌಡರು ಸೂಚನೆ ನೀಡಿದ್ದಾರೆ.
ರಾಯಚೂರು ಜಿಲ್ಲಾ ನ್ಯಾಯಾಧೀಶರು ಜನವರಿ 26 ರಂದು ಗಣರಾಜ್ಯೋತ್ಸವ ಸಮಾರಂಭದ ಸ್ಥಳದಿಂದ ಅಂಬೇಡ್ಕರ್ ಅವರ ಫೋಟೋ ತೆಗೆಸಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ನ್ಯಾಯಾಧೀಶರು, ತಾವು ಫೋಟೋ ತೆಗೆಸಿರಲಿಲ್ಲ. ತಮ್ಮ ಅರಿವಿಗೆ ಬಾರದೆ ಅಲ್ಲಿ ಫೋಟೋ ಇಟ್ಟು ತೆಗೆಯಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ವಿವಾದಕ್ಕೆ ಕಾರಣವಾಗಿತ್ತು. ಈಗ ಹೈಕೋರ್ಟ್ ಅಂಬೇಡ್ಕರ್ ಫೋಟೋ ವಿವಾದಕ್ಕೆ ಅಂತ್ಯಹಾಡಿದೆ ಎನ್ನಲಾಗಿದೆ.