ಬೆಂಗಳೂರು: ಅಂಬಾರಿ ಉತ್ಸವ್ ಬಸ್ ಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಕೆ ಎಸ್ ಆರ್ ಟಿಸಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಬಸ್ ಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಬಸ್ ಗಳಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚಿಸಿದ್ದಾರೆ. ಬರುವ ಪ್ರತಿ ಪ್ರಯಾಣಿಕರ ಚಲನವಲನಗಳ ಮೇಲೆ ಕಣ್ಣಿಡುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ 20 ಅಂಬಾರಿ ಉತ್ಸವ್ ಬಸ್ ಗಳಿದ್ದು, ಈ ಪೈಕಿ ಬೆಂಗಳೂರಿನಲ್ಲಿ 16 ಹಾಗೂ ಕುಂದಾಪುರ ಮತ್ತು ಮಂಗಳೂರಿನಲ್ಲಿ 4 ಬಸ್ ಗಳಿವೆ. ಅಂಬಾರಿ ಬಸ್ ಎಸಿ ಸ್ಲೀಪರ್ ಕೋಚ್ ಬಸ್ ಗಳಾಗಿದ್ದು, ಹೈದರಾಬಾದ್, ಚೆನ್ನೈ ಹಾಗೂ ಎರ್ನಾಕುಲಂಗೆ ಸಹ ಸಂಚರಿಸುತ್ತದೆ. ಅಂಬಾರಿ ಉತ್ಸವ್ ಬಸ್ ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಯಾಣಿಕರ ಬಗ್ಗೆ ಗಮನವಹಿಸಲಾಗುತ್ತಿದೆ.