ಸಕಾಲದಲ್ಲಿ ಮಳೆಯಾಗದೆ ಕರ್ನಾಟಕದಲ್ಲಿ ಈಗ ಬರ ಪರಿಸ್ಥಿತಿ ತಲೆದೋರಿದೆ. ನೀರಿಲ್ಲದೆ ಜಲಾಶಯಗಳು ತಳ ಕಾಣುತ್ತಿದ್ದು, ತಾವು ಬೆಳೆದ ಬೆಳೆ ಕಣ್ಣೆದುರೇ ಒಣಗಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
ಜಲಾಶಯಗಳಲ್ಲಿ ನೀರಿಲ್ಲದೆ ಇರುವ ಕಾರಣ ಜಲಸ್ಥಾವರಗಳ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಹೀಗಾಗಿ ರಾಜ್ಯದಾದ್ಯಂತ ಈಗ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎನ್ನಲಾಗುತ್ತಿದೆ.
ರಾಜ್ಯದ ಜಲಾಶಯಗಳಲ್ಲೇ ನೀರು ಇಲ್ಲದೆ ಇರುವುದರ ಮಧ್ಯೆ ಕೆ ಆರ್ ಎಸ್ ನಿಂದ ತಮಿಳುನಾಡಿಗೆ ನೀರು ಬಿಡಲು ಆದೇಶವಾಗಿರುವುದು ರಾಜ್ಯದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಈಗಾಗಲೇ ಬೆಂಗಳೂರು ಬಂದ್ ಸೇರಿದಂತೆ ಹಲವು ರೀತಿಯ ಪ್ರತಿಭಟನೆಗಳು ನಡೆದಿವೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಆಡಿರುವ ಮಾತುಗಳ ಹಳೆ ವಿಡಿಯೋ ಒಂದು ವೈರಲ್ ಆಗಿದ್ದು, ರಾಜ್ಯದ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ.
ಈ ವಿಡಿಯೋದಲ್ಲಿ ಅಂಬರೀಶ್ ಅವರು, ”ನಾವೇನು ಕೇಳ್ತಿಲ್ಲ, ನೀರು ಬಿಡಲ್ಲ ಅಂತ ಹೇಳ್ತಿಲ್ಲ. ನೀರು ಬಿಡ್ತೀವಿ. ನಮ್ಮತ್ರ ನೂರು ರೂಪಾಯ್ ಇದ್ದಾಗ ಐವತ್ರೂಪಾಯಿ ಕೇಳಿ……. ಒಂದು ರೂಪಾಯಿ ಇದ್ದಾಗ ಯಾಕಪ್ಪ ಐವತ್ರೂಪಾಯಿ ಕೇಳ್ತೀರಾ ? ಇದು ಅನ್ಯಾಯ” ಎಂದು ಹೇಳಿದ್ದು, ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತಿದೆ.