ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಅಮೇಜಾನ್ ಕಂಪನಿಗೆ ವಂಚಿಸುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಆರೋಪಿ ವಿದ್ಯಾರ್ಥಿ, ಗ್ರಾಹಕರ ಸೋಗಿನಲ್ಲಿ ಅಮೇಜಾನ್ ನಿಂದ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಆರ್ಡರ್ ಮಾಡಿ ವಸ್ತುಗಳನ್ನು ಪಡೆದು, ಆರ್ಡರ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ ಪಾವತಿಯಾದ ಹಣ ವಾಪಸ್ ಪಡೆದು ವಂಚಿಸುತ್ತಿದ್ದ. ಕಂಪನಿ ವ್ಯವಸ್ಥಾಪಕರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿ ತನ್ನ ಸಹಪಾಠಿಗಳ ಗುಂಪು ಕಟ್ಟಿಕೊಂಡು ಅಮೇಜಾನ್ ನಲ್ಲಿ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದ. ವಸ್ತುಗಳು ತನ್ನ ವಿಳಾಸಕ್ಕೆ ಡೆಲಿವರಿ ಆಗುತ್ತಿದ್ದಂತೆ ಆಪ್ ನಲ್ಲಿ ಆರ್ಡರ್ ರದ್ದು ಮಾಡುತ್ತಿದ್ದ. ವಸ್ತುಗಳನ್ನು ವಾಪಸ್ ಕೊಡುವುದಾಗಿ ಹೇಳುತ್ತಿದ್ದ. ಆರಡರ್ ರದ್ದಾಗುತ್ತಿದ್ದಂತೆ ಕಂಪನಿಯವರು ಆರೋಪಿ ಖಾತೆಗೆ ಹಣ ವಾಪಸ್ ಜಮೆ ಮಾಡುತ್ತಿದ್ದರು. ಆದರೆ ಡೆಲಿವರಿ ಬಾಯ್ ಗೆ ವಸ್ತುಗಳನ್ನು ಆರೋಪಿ ವಾಪಸ್ ಕೊಡುತ್ತಿರಲಿಲ್ಲ. ಇದೇ ರೀತಿ ಹಲವು ಬಾರಿ ಅಮೇಜಾನ್ ಗೆ ವಂಚಿಸಿದ್ದ. ಅಲ್ಲದೇ ವಂಚನೆ ಮೂಲಕ ಪಡೆದ ವಸ್ತುಗಳನ್ನು ಟೆಲಿಗ್ರಾಮ್ ಗ್ರೂಪ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದ. ಈ ಮೂಲಕ ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ಕೂಡಿಟ್ಟಿದ್ದ. ವಿದ್ಯಾರ್ಥಿಯ ವಂಚನೆ ಬಯಲಾಗುತ್ತಿದ್ದಂತೆ ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು, ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.