ಜಗತ್ತಿನಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಲು 55,000 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವುದಾಗಿ ತಾಂತ್ರಿಕ ಲೋಕದ ದಿಗ್ಗಜ ಅಮೇಜ಼ಾನ್ ತಿಳಿಸಿದೆ. ಇವುಗಳಲ್ಲಿ 40,000 ನೇಮಕಾತಿಗಳು ಅಮೆರಿಕದಲ್ಲೇ ಇರಲಿವೆ.
ಟೆಕ್ ಹುದ್ದೆಗಳಿಂದ ಕಾರ್ಪೋರೇಟ್ ಹುದ್ದೆಗಳವರೆಗೂ, ದಾಸ್ತಾನು ಸಂಗ್ರಹದ ಪ್ಯಾಕಿಂಗ್ ಹಾಗೂ ಶಿಪ್ಪಿಂಗ್‌ವರೆಗೂ ಆನ್ಲೈನ್ ಶಾಪಿಂಗ್ ದೈತ್ಯ ಹೊಸ ನೇಮಕಾತಿಗಳನ್ನು ಮಾಡಲಿದೆ.
ಸಾಂಕ್ರಮಿಕ ಕಾಲಘಟ್ಟದಲ್ಲಿ ಇನ್ನಿತರ ಕಂಪನಿಗಳಲ್ಲಿ ಉದ್ಯೋಗಗಳ ಕಡಿತ ಕಂಡುಬಂದರೆ, ಅಮೇಜ಼ಾನ್‌ನ ಸಿಬ್ಬಂದಿ ಬಲವು ಇದೇ ಅವಧಿಯಲ್ಲಿ ಹಿಗ್ಗಿದೆ. ಸಾಂಕ್ರಮಿಕದಿಂದಾಗಿ ಮನೆಯಲ್ಲೇ ಇರುವ ಜನರು ದಿನಸಿ ಸಾಮಾನುಗಳಿಂದ ಟಾಯ್ಲೆಟ್ ಪೇಪರ್‌ವರೆಗೂ ಮನೆಯಿಂದಲೇ ಆನ್ಲೈನ್‌ನಲ್ಲಿ ಆರ್ಡರ್ ಮಾಡುತ್ತಿರುವ ಕಾರಣ ಕಳೆದೊಂದು ವರ್ಷದಲ್ಲೇ ಐದು ಲಕ್ಷ ಮಂದಿಯನ್ನು ಅಮೆಜ಼ಾನ್ ಕೆಲಸಕ್ಕೆ ತೆಗೆದುಕೊಂಡಿದೆ.
ಸದ್ಯ 13 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಹೊಂದಿರುವ ಅಮೇಜ಼ಾನ್, ವಾಲ್ಮಾರ್ಟ್ ಬಿಟ್ಟರೆ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಿರುವ ಅಮೆರಿಕದ ಖಾಸಗಿ ಕಂಪನಿಯಾಗಿದೆ. ಇದೇ ವೇಳೆ 20,000 ಸಿಬ್ಬಂದಿಯನ್ನು ತನ್ನ ಆನ್ಲೈನ್ ಆರ್ಡರ್‌ಗಳ ಮೇಲೆ ಕೆಲಸ ಮಾಡಲು ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ವಾಲ್ಮಾರ್ಟ್ ತಿಳಿಸಿದೆ.
ಕ್ಲೈಡ್ ಕಂಪ್ಯೂಟಿಂಗ್ ನಿಂದ ತನ್ನದೇ ಉಪಗ್ರಹ ಉಡಾವಣೆ ಮಾಡುವವರೆಗೂ ತಾಂತ್ರಿಕ ಲೋಕದ ಅನೇಕ ಕ್ಷೇತ್ರಗಳಲ್ಲಿ ಉಪಸ್ಥಿತವಿರುವ ಸಿಯಾಟಲ್ ಮೂಲದ ಕಂಪನಿಯು, ಅಮೆರಿಕ ಒಂದರಲ್ಲೇ 220 ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದೆ.