ಸಾಮಾಜಿಕ ಜಾಲತಾಣಗಳು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್ ಫಾರ್ಮ್ ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಈ ಪ್ಲಾಟ್‌ಫಾರ್ಮ್ ಉಚಿತವಾಗಿ ಸಿಗುವುದಿಲ್ಲ. ಇದಕ್ಕೆ ಹಣ ನೀಡಿ ಚಂದಾದಾರರಾಗಬೇಕು. ಅಮೆಜಾನ್ ಪ್ರೈಮ್ ಸದಸ್ಯತ್ವ ಪಡೆಯುವ ಪ್ಲಾನ್ ನಲ್ಲಿದ್ದರೆ ಇಂದೇ ಪ್ಲಾನ್ ಖರೀದಿ ಮಾಡಿ. ಯಾಕೆಂದ್ರೆ ನಾಳೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ದುಬಾರಿಯಾಗಲಿದೆ.
ಅಮೆಜಾನ್ ಪ್ರೈಮ್ ತನ್ನ ಪ್ಲಾಟ್‌ಫಾರ್ಮ್‌ನ ಸದಸ್ಯತ್ವ ಶುಲ್ಕವನ್ನು ಹೆಚ್ಚಿಸುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದೆ. ಅಕ್ಟೋಬರ್ ನಲ್ಲಿಯೇ ಬೆಲೆ ಏರಿಕೆ ಮಾಡುವುದಾಗಿ ಅಮೆಜಾನ್ ಪ್ರೈಮ್ ಹೇಳಿಕೆ ನೀಡಿತ್ತು. ಆದ್ರೆ ದಿನಾಂಕ ಘೋಷಣೆ ಮಾಡಿರಲಿಲ್ಲ. ನಂತ್ರ ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 13ರ ಮಧ್ಯರಾತ್ರಿಯಿಂದ ಅಮೆಜಾನ್ ಪ್ರೈಂ ಸದಸ್ಯತ್ವ ಶುಲ್ಕ ಹೆಚ್ಚಾಗಲಿದೆ.
ಅಮೆಜಾನ್ ಪ್ರೈಮ್ ನಲ್ಲಿ ಮೂರು ಯೋಜನೆಗಳಿವೆ. ಒಂದು ತಿಂಗಳ ಯೋಜನೆ ಮತ್ತೊಂದು ಮೂರು ತಿಂಗಳ ಯೋಜನೆಯಾದ್ರೆ ಕೊನೆಯ ಯೋಜನೆ ಒಂದು ವರ್ಷದ್ದಾಗಿದೆ. 30 ದಿನಗಳ ಪ್ಲಾನ್‌ನ ಬೆಲೆ 179 ರೂಪಾಯಿ. ಮೂರು ತಿಂಗಳ ಚಂದಾದಾರಿಕೆಗೆ 459 ರೂಪಾಯಿ ಪಾವತಿಸಬೇಕು. ಒಂದು ವರ್ಷದ ಪ್ಲಾನ್ ಗೆ 1,599 ರೂಪಾಯಿ ಪಾವತಿಸಬೇಕು.
ಇಲ್ಲಿಯವರೆಗೆ ಒಂದು ತಿಂಗಳ ಯೋಜನೆಗೆ ಗ್ರಾಹಕರು 129 ರೂಪಾಯಿ ಪಾವತಿ ಮಾಡುತ್ತಿದ್ದರು. ಮೂರು ತಿಂಗಳ ಯೋಜನೆಗೆ 329 ರೂಪಾಯಿ ಪಾವತಿಸುತ್ತಿದ್ದರು. ಒಂದು ವರ್ಷದ ಯೋಜನೆಗೆ ಗ್ರಾಹಕರು 999 ರೂಪಾಯಿ ಪಾವತಿಸುತ್ತಿದ್ದರು.
ಈಗಾಗಲೇ ಈ ಪ್ಲಾನ್ ಖರೀದಿ ಮಾಡಿದವರು ಹಳೇ ಪ್ಲಾನ್ ನಲ್ಲಿಯೇ ಮುಂದುವರೆಯಲಿದ್ದಾರೆ. ಆದ್ರೆ ಪ್ಲಾನ್ ಅವಧಿ ಮುಗಿದ ನಂತ್ರ ಪ್ಲಾನ್ ಮುಂದುವರೆಸಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.