ಶ್ರೀನಗರ: ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಪಹಲ್ಗಾಮ್ ಮೂಲಕ ಪವಿತ್ರ ಅಮರನಾಥ ಗುಹೆಗೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡಲಾಗಿದೆ.
ನುನ್ವಾನ್ ಬೇಸ್ ಕ್ಯಾಂಪ್ ನಿಂದ ಯಾತ್ರಿಗಳು ಪ್ರಯಾಣ ಬೆಳೆಸಿದ್ದಾರೆ. ಪಹಲ್ಗಾಮ್ ಮಾರ್ಗದಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್ ನಿಂದ ಬಾಲ್ಸಾಲ್ ಮೂಲಕ ಹೆಲಿಕಾಪ್ಟರ್ ಸೇವೆ ಆರಂಭಿಸಲಾಗಿದೆ. ಈ ಹಿಂದೆ ನೋಂದಾಯಿಸಿಕೊಂಡ ಯಾತ್ರಿಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ.
ಮೇಘಸ್ಫೋಟದ ನಂತರ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ನುನ್ವಾನ್ ಪಹಲ್ಗಾಮ್ ಕಡೆಯಿಂದ ಪುನರಾರಂಭಗೊಂಡಿದೆ ಎಂದು ಶ್ರೀ ಅಮರನಾಥ ಜಿ ಶ್ರೈನ್ ಬೋರ್ಡ್ ತಿಳಿಸಿದೆ.
ಯಾತ್ರೆ ಪುನರಾರಂಭಗೊಳ್ಳಲು ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಕಾಯುತ್ತಿದ್ದ ಯಾತ್ರಾರ್ಥಿಗಳು ಸೋಮವಾರ ತಮ್ಮ ಯಾತ್ರೆಯನ್ನು ಪುನರಾರಂಭಿಸಿದ್ದಾರೆ.
ಶುಕ್ರವಾರ ಅಮರನಾಥ ಗುಹೆಯ ದೇಗುಲದ ಬಳಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿ 16 ಜನ ಸಾವನ್ನಪ್ಪಿದ್ದಾರೆ. ಕನಿಷ್ಠ ಮೂರು ಡಜನ್ ಜನರು ಕಾಣೆಯಾಗಿದ್ದಾರೆ. ಮೇಘಸ್ಫೋಟದ ನಂತರ ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಪತ್ತೆಹಚ್ಚಲು ಭಾರತೀಯ ಸೇನೆಯು ಕಾರ್ಯಾಚರಣೆ ಮುಂದುವರೆಸಿದೆ.