ಶ್ರೀ ಅಮರನಾಥ ದೇಗುಲ ಮಂಡಳಿಯು ಈ ವರ್ಷ ಯಾತ್ರೆಗೆ ಬರಲು ಸಾಧ್ಯವಾಗದ ಭಕ್ತರಿಗೆ ವರ್ಚುವಲ್ ದರ್ಶನ, ಪೂಜೆ ಮತ್ತು ಹವನ ಮಾಡಲು ಸಮಗ್ರ ಆನ್‌ಲೈನ್ ಸೌಲಭ್ಯ ಕಲ್ಪಿಸಿದೆ.
ಅತೀ ದುರ್ಗಮ ದಾರಿಯಲ್ಲಿ, ಕ್ಲಿಷ್ಟಕರ ವಾತಾವರಣದಲ್ಲಿ ಅಮರನಾಥನ ದರುಷನ ಮಾಡಲು ಸಾಧ್ಯವಾಗದವರಿಗೆ ತಂತ್ರಜ್ಞಾನ ಮುಖೇನ ಅವಕಾಶ ಕಲ್ಪಿಸುವ ಪ್ರಯತ್ನ ನಡೆದಿದೆ.
ಭಕ್ತರು ತಮ್ಮ ಪೂಜೆ, ಹವನ ಮತ್ತು ಪ್ರಸಾದವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಪುರೋಹಿತರು ಭಕ್ತನ ಹೆಸರಿನಲ್ಲಿ ಅಮರನಾಥನಿಗೆ ಗುಹೆಯಲ್ಲಿ ಅರ್ಪಿಸುತ್ತಾರೆ. ನಂತರ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ದೇಗುಲ ಮಂಡಳಿಯ ಅಧಿಕಾರಿ ತಿಳಿಸಿದ್ದಾರೆ.
ಆನ್‌ಲೈನ್ ಸೇವೆಗಳನ್ನು ಅಧಿಕೃತ ಜಾಲತಾಣ www.shriamarnathjishrine.com ಮೂಲಕ ಆನ್‌ಲೈನ್ ಪೂಜೆ, ಹವನ, ಪ್ರಸಾದಕ್ಕೆ ಬುಕಿಂಗ್ ಮಾಡಬಹುದು. ಮೊಬೈಲ್ ಅಪ್ಲಿಕೇಶನ್ ಮೂಲಕವೂ ಬುಕಿಂಗ್‌ಗೆ ಅವಕಾಶವಿದೆ ಎಂದು ಎಸ್‌ಎಎಸ್‌ಬಿ ಸಿಇಒ ನಿತೀಶ್ವರ್ ಕುಮಾರ್ ಹೇಳಿದ್ದಾರೆ.
ಮಂತ್ರ ಮತ್ತು ಶ್ಲೋಕಗಳ ಪಠಣದೊಂದಿಗೆ ಭಕ್ತರ ಹೆಸರು, ಗೋತ್ರವನ್ನು ಉಚ್ಚರಿಸುವ ಮೂಲಕ ಗುಹಾ ದೇಗುಲದಲ್ಲಿ ಪುರೋಹಿತರು ವರ್ಚುಯಲ್ ಆಗಿ ಪೂಜೆ, ಹೋಮದಲ್ಲಿ ಪಾಲ್ಗೊಳಲು ಅವಕಾಶ ಮಾಡಿಕೊಡಲಿದ್ದಾರೆ.
ಭಕ್ತರನ್ನು ಜಿಯೋ ಮೀಟ್ ಅಪ್ಲಿಕೇಶನ್ ಮೂಲಕ ವರ್ಚುವಲ್ ಆನ್‌ಲೈನ್ ರೂಮ್‌ಗೆ ಪ್ರವೇಶ ಮಾಡಿಸಿ, ವಿಶೇಷ ವರ್ಚುವಲ್ ಪೂಜೆ ಮತ್ತು ಶಿವನ ದರ್ಶನವನ್ನು ಮಾಡಿಸಲಾಗುತ್ತದೆ. ಈಮೂಲಕ ಲಭ್ಯವಿರುವ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಬಳಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಮಾಡಿಕೊಳ್ಳಲಾಗುತ್ತಿದೆ.
ಪೂಜೆಯ ತರುವಾಯ 48 ಗಂಟೆಗಳ ಒಳಗೆ ಪ್ರಸಾದ ಕಳುಹಿಸಲು ಅಂಚೆ ಇಲಾಖೆಯೊಂದಿಗೆ ವ್ಯವಸ್ಥೆ ಮಾಡಿದ್ದೇವೆ. ಎಂದು ಎಸ್‌ಎಎಸ್‌ಬಿ ಸಿಇಒ ತಿಳಿಸಿದ್ದಾರೆ.