ಈ ಬಾರಿಯೂ ಜೆಡಿಎಸ್ ಕರ್ನಾಟಕದಲ್ಲಿ ಕಿಂಗ್ ಮೇಕರ್ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸ್ತಿದ್ದು ಈ ನಡುವೆ ಮಾತನಾಡಿರುವ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ನಮ್ಮದು ಸಣ್ಣ ಪಕ್ಷ, ನನ್ನ ಯಾವುದೇ ಬೇಡಿಕೆಯೂ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಚುನಾವಣಾ ಫಲಿತಾಂಶಗಳ ಎಣಿಕೆ ಪ್ರಾರಂಭವಾಗುವ ನಿಮಿಷಗಳ ಮೊದಲು ಮಾತನಾಡಿದ ಅವರು ನಾವು ಯಾವುದೇ ಪಕ್ಷದ ಸಂಪರ್ಕದಲ್ಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಂದಿನ 2-3 ಗಂಟೆಗಳಲ್ಲಿ ಫಲಿತಾಂಶ ಸ್ಪಷ್ಟವಾಗಲಿದೆ. ಎಕ್ಸಿಟ್ ಪೋಲ್‌ಗಳು ಎರಡು ರಾಷ್ಟ್ರೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ಸ್ಕೋರ್ ಮಾಡುತ್ತವೆ ಎಂದು ತೋರಿಸಿದೆ. ಸಮೀಕ್ಷೆಗಳು ಜೆಡಿಎಸ್‌ಗೆ 30-32 ಸ್ಥಾನಗಳನ್ನು ನೀಡಿವೆ. ನನ್ನದು ಸಣ್ಣ ಪಕ್ಷ, ನನಗೆ ಯಾವುದೇ ಬೇಡಿಕೆಯಿಲ್ಲ. ಉತ್ತಮ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು.
ಇಲ್ಲಿಯವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮೊದಲು ಅಂತಿಮ ಫಲಿತಾಂಶವನ್ನು ನೋಡೋಣ. ಎಕ್ಸಿಟ್ ಪೋಲ್ ಪ್ರಕಾರ ಆಯ್ಕೆಗಳ ಅಗತ್ಯವಿಲ್ಲ, ನೋಡೋಣ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ ಎಂದು ಇತ್ತೀಚಿಗೆ ಹೇಳಿದ್ದ ತನ್ವೀರ್ ಅಹ್ಮದ್ ಮಾತನ್ನ ಹೆಚ್ ಡಿ ಕುಮಾರಸ್ವಾಮಿ ತಳ್ಳಿಹಾಕಿದರು.
ತನ್ವೀರ್ ಅಹ್ಮದ್ ನಮ್ಮ ವಕ್ತಾರರಲ್ಲ. ಅವರು ನಮ್ಮ ಪಕ್ಷದ ಸದಸ್ಯರೂ ಅಲ್ಲ. ಅವರು ಬಹಳ ಹಿಂದೆಯೇ ನಮ್ಮ ಪಕ್ಷ ತೊರೆದಿದ್ದಾರೆ. ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದರು.
ಬಹುಪಾಲು ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಭವಿಷ್ಯ ನುಡಿದಿರುವುದರಿಂದ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮನ್ನ ಸಂಪರ್ಕಿಸಿವೆ. ಕಾಲ ಬಂದಾಗ ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜೆಡಿಎಸ್ ನಾಯಕರೆಂದು ಹೇಳಿಕೊಂಡಿದ್ದ ತನ್ವೀರ್ ಅಹ್ಮದ್ ಗುರುವಾರ ಹೇಳಿಕೊಂಡಿದ್ದರು.