ತಾವು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಅನೇಕ ಬಾರಿ ಹೇಳಿಕೆ ನೀಡಿರುವ ಸಚಿವ ಉಮೇಶ್ ಕತ್ತಿ ಇದೀಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮತ್ತೆ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದವರೆ ಸಿಎಂ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ನಾನು 8 ಬಾರಿ ಶಾಸಕನಾದವನು. ಆರು ಇಲಾಖೆಗಳನ್ನ ನಿರ್ವಹಿಸಿದ ಅನುಭವ ನನಗಿದೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಸಿಎಂ ಆಗುವ ಎಲ್ಲಾ ಯೋಗ್ಯತೆ ನನಗಿದೆ. ಒಬ್ಬ ಕಳಂಕರಹಿತ ಶಾಸಕ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ತೀರ್ಮಾನ ಮಾಡಿದಲ್ಲಿ ನನಗೂ ಸಿಎಂ ಆಗುವ ಆಸೆ ಇದೆ. ಸಿಎಂ ಆದ್ಮೇಲೆ ಪ್ರಧಾನಿಯಾಗುವ ಆಸೆಯೂ ಇರುತ್ತದೆ. ಸದ್ಯಕ್ಕೆ ನಾನು ಅಖಂಡ ಕರ್ನಾಟಕದಲ್ಲಿ ಬದುಕಿದ್ದೇನೆ. ಹೀಗಾಗಿ ಅಖಂಡ ಕರ್ನಾಟಕಕ್ಕೆ ಸಿಎಂ ಆಗುವೆ ಎಂದು ಹೇಳಿದ್ದಾರೆ .
ಉತ್ತರ ಕರ್ನಾಟಕಕ್ಕೆ ತೊಂದರೆ ಆದರೆ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುತ್ತೇನೆ. ಬೆಳಗ್ಗೆ ಎದ್ದ ತಕ್ಷಣ ಉತ್ತರ ಕರ್ನಾಟಕವನ್ನ ಒಡೆಯೋಕೆ ಆಗೋದಿಲ್ಲ . ಕರ್ನಾಟಕವನ್ನ ಒಡೆಯುವ ಉದ್ದೇಶ ಕೂಡ ನನ್ನದಲ್ಲ. ಆದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಮಾತ್ರ ಧ್ವನಿ ಎತ್ತುತ್ತೇನೆ. ನಾವೆಲ್ಲ ಅಖಂಡ ಕರ್ನಾಟಕದಲ್ಲಿ ಬದುಕಬೇಕು ಹಾಗೂ ಇದನ್ನ ನಾನು ಆಳಬೇಕು ಅನ್ನೋದೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ನನಗೆ ಸಿಎಂ ಆಗಲು ಇನ್ನೂ 15 ವರ್ಷಗಳ ಅವಕಾಶ ಇದೆ. ಅರವಿಂದ ಬೆಲ್ಲದ್, ಯತ್ನಾಳ್, ಮುರುಗೇಶ ನಿರಾಣಿ ಹೀಗೆ ಉತ್ತರ ಕರ್ನಾಟಕದ ಯಾರು ಬೇಕಿದ್ದರೂ ಸಿಎಂ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.