ಮಕ್ಕಳಿಗೆ ಶಾಲೆಯಂತೂ ಇಲ್ಲ. ಮನೆಯ ಒಳಗಡೆ ಕುಳಿತುಕೋ ಎಂದರೆ ಎಷ್ಟು ಹೊತ್ತು ತಾನೇ ಕುಳಿತುಕೊಂಡಾರು. ಪಕ್ಕದ್ಮನೆಗೆ ಹೋಗಿ ಆಡಿದರೆ ಅವರ ಮನಸ್ಸಿಗೂ ರಿಲ್ಯಾಕ್ಸ್ ಆಗುತ್ತದೆ ಎಂದು ಬಿಟ್ಟುಬಿಡುವವರಲ್ಲಿ ನೀವೂ ಒಬ್ಬರಾ…? ಮಕ್ಕಳನ್ನು ಹೊರಗಡೆ ಯಾರಾದಾದರೂ ಮನೆಗೆ ಕಳುಹಿಸುವಾಗ ಆದಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.
ಎಲ್ಲರೂ ಒಳ್ಳೆಯವರು ಎಂದು ನಂಬಬೇಡಿ. ಆದಷ್ಟು ಮಗುವಿಗೆ ಎಚ್ಚರಿಕೆ ನೀಡಿ. ಈಗ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣ ಜಾಸ್ತಿ ಆಗುತ್ತಿದೆ. ಹಾಗಾಗಿ ಪಕ್ಕದ್ಮನೆಗೆ ಕಳುಹಿಸುವಾಗ ಸ್ವಲ್ಪ ಕಾಳಜಿ ವಹಿಸಿ. ನಿಮ್ಮ ಮಗುವಿಗೆ ಅದರ ಖಾಸಗಿ ಭಾಗಗಳನ್ನು ಯಾರಾದರೂ ಮುಟ್ಟಿದರೆ ತಕ್ಷಣ ಮನೆಗೆ ಬಂದು ಹೇಳುವುದಕ್ಕೆ ಹೇಳಿ. ಹಾಗೇ ಅದರ ಜತೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ ತಕ್ಷಣ ಚೀರುವುದಕ್ಕೆ ಹೇಳಿ.
ಹಾಗೇ ಮಕ್ಕಳು ಆಟವಾಡುತ್ತಾ ಇರುತ್ತಾರೆ ಎಂದು ಸುಮ್ಮನೇ ಇರಬೇಡಿ. ಅವರ ಮಧ್ಯೆ ಯಾವ ವಿಷಯದ ಮಾತುಕತೆ ಆಗುತ್ತಿರುತ್ತದೆ, ಅವರು ಏನು ಆಟ ಆಡುತ್ತಿದ್ದಾರೆ ಎಂಬುದನ್ನು ಗಮನಿಸಿ. ನೀವೂ ಕೂಡ ಅವರ ಜತೆ ಸಮಯ ಕಳೆಯಿರಿ. ಆಗ ದೊಡ್ಡವರು ನೋಡುತ್ತಿರುತ್ತಾರೆ ಎಂಬ ಭಯ ಮಕ್ಕಳಿಗಿರುತ್ತದೆ.
ಪಕ್ಕದ್ಮನೆಗೆ ಹೋಗಿ ಬಂದ ಮಕ್ಕಳ ವರ್ತನೆಯಲ್ಲಿ, ಮಾತಿನಲ್ಲಿ ಬದಲಾವಣೆ ಕಂಡು ಬಂದರೆ ಮಕ್ಕಳನ್ನು ಅವರ ಜತೆ ಬೆರೆಯುವುದಕ್ಕೆ ಬಿಡಬೇಡಿ. ಕೆಲವೊಮ್ಮೆ ಇತರರ ಸಹವಾಸದಿಂದ ಬೇಗನೆ ದುರಾಭ್ಯಾಸ ಕಲಿತುಕೊಂಡು ಬಿಡುತ್ತಾರೆ.