ಮನುಷ್ಯನ ದೇಹಕ್ಕೆ ಅದರಲ್ಲೂ ಸಸ್ಯಹಾರಿಗಳಿಗೆ ಎಣ್ಣೆ ಸೇವನೆ ಅತ್ಯಗತ್ಯ. ಶರೀರದ ನರಗಳಿಗೆ ಶಕ್ತಿ ಒದಗಿಸುವ ಕಾರ್ಯವನ್ನು ಇವು ಮಾಡುತ್ತವೆ. ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಹೀಗೆ ಎಲ್ಲ ರೀತಿಯ ಎಣ್ಣೆಯಲ್ಲೂ ಒಂದಲ್ಲ ಒಂದು ರೀತಿಯ ಔಷಧೀಯ ಗುಣ ಇದ್ದೇ ಇರುತ್ತದೆ. ಹಾಗೆಯೇ ಹರಳೆಣ್ಣೆಯೂ ಕೂಡ ಅನೇಕ ಔಷಧೀಯ ಗುಣವನ್ನು ಹೊಂದಿದೆ.
ಹರಳೆಣ್ಣೆಯನ್ನು ಶರೀರಕ್ಕೆ ಲೇಪಿಸಿಕೊಂಡು ಸ್ವಲ್ಪ ಕಾಲ ಬಿಸಿಲಿನಲ್ಲಿ ನಿಂತು ನಂತರ ಬಿಸಿ ನೀರಲ್ಲಿ ಸ್ನಾನ ಮಾಡುವುದರಿಂದ ಮೈಕೈ ನೋವು ದೂರವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.
ಹರಳು ಬೀಜದ ಸಿಪ್ಪೆ ತೆಗೆದು ಒಳಗಿನ ಬಿಳಿ ಭಾಗವನ್ನು ಎದೆ ಹಾಲಿನಲ್ಲಿ ತೇಯ್ದು ಹಚ್ಚುವುದರಿಂದ ಕಣ್ಣು ನೋವು ವಾಸಿಯಾಗುತ್ತದೆ.
ಕೂದಲಿಗೆ ಹರಳೆಣ್ಣೆ ಲೇಪಿಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಹೊಟ್ಟು ಏಳುವುದಿಲ್ಲ.
ಮಗುವಿಗೆ ಹೊಟ್ಟೆನೋವು ಬಂದು ಹೊಟ್ಟೆ ಉಬ್ಬರಿಸಿದರೆ ಹರಳೆಣ್ಣೆ ಸವರಿದ ವೀಳ್ಯದೆಲೆಯನ್ನು ಬಿಸಿ ಮಾಡಿ ಮಗುವಿನ ಹೊಟ್ಟೆಗೆ ಕಾವು ನೀಡಿದರೆ ಹೊಟ್ಟೆ ನೋವು ಶಮನವಾಗುತ್ತದೆ.
ಹರಳೆಣ್ಣೆ ಎಲೆಗೆ ಹರಳೆಣ್ಣೆಯನ್ನು ಸವರಿ ದೀಪದಲ್ಲಿ ಬಿಸಿ ಮಾಡಿ ಊತವಿರುವ ಕೀಲುಗಳಿಗೆ ಕಾವು ಕೊಟ್ಟರೆ ಊತ ಹಾಗೂ ನೋವು ಎರಡೂ ಕಡಿಮೆಯಾಗುತ್ತದೆ.
ನಿಂಬೆರಸದೊಂದಿಗೆ ಹರಳೆಣ್ಣೆಯನ್ನು ಬೆರೆಸಿ ಕುಡಿದರೆ ಹೊಟ್ಟೆ ತೊಳೆಸುವುದು, ನೋವು ಕಡಿಮೆಯಾಗುತ್ತದೆ.
ಅಪ್ಪಟ ಹರಳೆಣ್ಣೆಯನ್ನು ಕುಡಿಯುವುದರಿಂದ ಭೇದಿ ಆಗಿ ದೇಹ ಹಗುರಾಗುತ್ತದೆ. (ವಯೋಮಿತಿಗೆ ಅನುಗುಣವಾಗಿ ಸೇವಿಸತಕ್ಕದ್ದು)