ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದುಡಿಮೆ ಬಹಳ ಮುಖ್ಯ. ಪತಿ-ಪತ್ನಿ ಇಬ್ಬರು ದುಡಿದ್ರೂ ಸಂಸಾರ ನಡೆಸುವುದು ಕಷ್ಟ. ಈ ಸಂದರ್ಭದಲ್ಲಿ ಪಾಲಕರು ಅನಿವಾರ್ಯವಾಗಿ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗ್ತಾರೆ. ಆದ್ರೆ ಕೆಲಸಕ್ಕೆ ಹೋದ ಪಾಲಕರ ಮನಸ್ಸು ಮಾತ್ರ ಮಕ್ಕಳ ಬಗ್ಗೆಯೇ ಯೋಚಿಸುತ್ತಿರುತ್ತದೆ.
ಕಚೇರಿಯಲ್ಲಿ ಕುಳಿತು ಮಕ್ಕಳ ಬಗ್ಗೆ ಯೋಚನೆ ಮಾಡಿ ಒತ್ತಡಕ್ಕೊಳಗಾಗುವ ಬದಲು ನಿಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಿ. ನೀವು ದುಡಿಯುತ್ತಿರುವುದು ನಿಮ್ಮ ಮಕ್ಕಳಿಗಾಗಿ. ಅವರ ಉತ್ತಮ ಭವಿಷ್ಯ ಹಾಗೂ ಒಳ್ಳೆಯ ಜೀವನಕ್ಕಾಗಿ ನೀವು ಉದ್ಯೋಗ ಮಾಡ್ತಿದ್ದೀರೆಂಬುದನ್ನು ಅರಿತುಕೊಳ್ಳಿ.
ಶಿಶುಪಾಲನಾ ಕೇಂದ್ರಕ್ಕೆ ಹಾಕುವ ಮೊದಲು ಅದ್ರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ನಿಮ್ಮ ಮಕ್ಕಳು ಅಲ್ಲಿ ಸುರಕ್ಷಿತ ಎಂಬ ನಂಬಿಕೆ ನಿಮಗೆ ಬಂದ್ರೆ ನೀವು ಕಚೇರಿಯಲ್ಲಿ ಮಕ್ಕಳ ಬಗ್ಗೆ ಚಿಂತೆ ಮಾಡುವುದಿಲ್ಲ.
ತಂದೆ-ತಾಯಿ ಇಬ್ಬರೂ ಸೇರಿ ಮಕ್ಕಳನ್ನು ನೋಡಿಕೊಳ್ಳಬೇಕು. ಯಾವ ಕೆಲಸವನ್ನು ಯಾರು ಮಾಡಬೇಕು? ಮಕ್ಕಳನ್ನು ಸಿದ್ಧಪಡಿಸುವವರು ಯಾರು? ಅಡುಗೆ ಮಾಡುವವರು ಯಾರು? ಮಕ್ಕಳನ್ನು ಸ್ಕೂಲ್ ಗೆ ಬಿಡುವವರು ಯಾರು? ಎಂಬೆಲ್ಲದರ ಬಗ್ಗೆ ಮೊದಲೇ ಟೇಬಲ್ ಹಾಕಿಕೊಳ್ಳಿ.
ಬೆಳಿಗ್ಗೆ ಸ್ವಲ್ಪ ಬೇಗ ಏಳುವುದನ್ನು ರೂಢಿಸಿಕೊಳ್ಳಿ. ಮಗು ಏಳುವ ಮೊದಲು ನಿಮ್ಮ ಕೆಲಸ ಮುಗಿಸಿದ್ರೆ ಮಕ್ಕಳ ಜೊತೆ ಸ್ವಲ್ಪ ಸಮಯ ಆಡಬಹುದು.
ಮಕ್ಕಳಾದ ಮೇಲೆ ನಿಮಗೆ ಹೊಂದುವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಿ. ತುಂಬಾ ಒತ್ತಡವಿಲ್ಲದ, ಮಕ್ಕಳ ಬಗ್ಗೆ ಪ್ರೀತಿ ಇರುವ ಬಾಸ್ ನಿಮಗೆ ಸಿಕ್ಕರೆ ನಿಮ್ಮ ಕೆಲಸ ಸುಗಮ. ಇದು ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಕಚೇರಿಯ ಕೆಲಸ ಮಾಡಿ. ಆಗ ಮಕ್ಕಳಿಗೂ ಸಮಯ ನೀಡಲು ಸಾಧ್ಯವಾಗುತ್ತದೆ.
ವೀಕೆಂಡ್ ನಲ್ಲಿ ಮಕ್ಕಳ ಜೊತೆ ಹೊರಗೆ ಸುತ್ತಿ ಬನ್ನಿ. ನೆನಪಿರಲಿ ಕಚೇರಿ ಕೆಲಸಗಳು ನಿಮ್ಮ ಪ್ರೀತಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ.