alex Certify ಮಾನಸಿಕ ಆರೋಗ್ಯದ ಜೊತೆಗೆ ನಿದ್ದೆಯ ಸಮಸ್ಯೆಯನ್ನೂ ನಿವಾರಿಸುತ್ತದೆ ಈ ಸುಲಭದ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನಸಿಕ ಆರೋಗ್ಯದ ಜೊತೆಗೆ ನಿದ್ದೆಯ ಸಮಸ್ಯೆಯನ್ನೂ ನಿವಾರಿಸುತ್ತದೆ ಈ ಸುಲಭದ ಕೆಲಸ

ತಂತ್ರಜ್ಞಾನ ನಮ್ಮ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿದೆ. ಸ್ಮಾರ್ಟ್‌ಫೋನ್‌ಗಳಿಲ್ಲದೆ ಅರೆಕ್ಷಣ ಕಳೆಯುವುದು ಕೂಡ ಅಸಾಧ್ಯ ಎಂಬ ಸ್ಥಿತಿಗೆ ಜನರು ತಲುಪಿದ್ದಾರೆ. ಬೆಳಗ್ಗೆ ಎದ್ದತಕ್ಷಣ ಫೋನ್ ನೋಡುವುದು, ಮಲಗುವ ಮುನ್ನ ಸ್ಕ್ರೋಲಿಂಗ್ ಮಾಡುವುದು, ಆಗಾಗ ನೋಟಿಫಿಕೇಶನ್‌ಗಳ ಕಲರವ ಇವೆಲ್ಲ ಈಗ ಸಾಮಾನ್ಯ. ಆದರೆ ಒಂದು ವಾರ ಫೋನ್ ಜಂಜಾಟಗಳಿಂದ ದೂರವಿದ್ದರೆ ಹೇಗಿರುತ್ತೆ? ಇದನ್ನು ಯಾರೂ ಊಹಿಸಿರಲಿಕ್ಕಿಲ್ಲ.

ಡಿಜಿಟಲ್ ಡಿಟಾಕ್ಸ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಾಗ್ತಿದೆ. ಡಿಜಿಟಲ್ ಸಾಧನಗಳಿಂದ ಅದರಲ್ಲೂ ವಿಶೇಷವಾಗಿ ಸ್ಮಾರ್ಟ್‌ಫೋನ್‌ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಸ್ವಲ್ಪ ಸಮಯ  ದೂರವಿರುವುದನ್ನು ಡಿಜಿಟಲ್‌ ಡಿಟಾಕ್ಸ್‌ ಎಂದು ಕರೆಯಲಾಗುತ್ತದೆ. ನಿರಂತರವಾದ ಸ್ಕ್ರೀನ್‌ ಟೈಮ್‌ ಮತ್ತು ಆನ್‌ಲೈನ್ ಉಪಸ್ಥಿತಿ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಡಿಜಿಟಲ್‌ ಡಿಟಾಕ್ಸ್‌ ಅನಿವಾರ್ಯ ಎನ್ನುತ್ತಾರೆ ತಜ್ಞರು.

ಡಿಜಿಟಲ್ ಜಗತ್ತಿನೊಂದಿಗೆ ನಿರಂತರವಾಗಿ ಸಂಪರ್ಕ ಹೊಂದುವುದರಿಂದ ಒತ್ತಡ, ಆತಂಕ ಮತ್ತು ನಿದ್ರೆಯ ಸಮಸ್ಯೆಳು ಉಂಟಾಗುತ್ತವೆ. ಇವುಗಳಿಂದ ಪರಿಹಾರ ಪಡೆಯಲು ಡಿಜಿಟಲ್ ಡಿಟಾಕ್ಸ್ ನಮಗೆ ಸಹಾಯ ಮಾಡುತ್ತದೆ. ಆದರೆ ಒಂದು ವಾರದವರೆಗೆ ಫೋನ್ ಅನ್ನು ಸಂಪೂರ್ಣವಾಗಿ ದೂರವಿಡುವುದು ಸುಲಭವಲ್ಲ.   ಆರಂಭದಲ್ಲಿ ಚಡಪಡಿಕೆಯ ಭಾವನೆ ಸಹಜ.

ಆದರೆ ಡಿಜಿಟಲ್‌ ಡಿಟಾಕ್ಸ್‌ ನಮ್ಮ ಮನಸ್ಸಿಗೆ ಸಮಾಧಾನ ನೀಡುತ್ತದೆ. ಫೋನ್‌ನಿಂದ ದೂರವಿರುವುದು ಏಕಾಗ್ರತೆಯನ್ನು ಸುಧಾರಿಸುತ್ತದೆ. ಇತರ ಕಾರ್ಯಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ. ಮಲಗುವ ಮುನ್ನ ಫೋನ್ ಬಳಸುವುದರಿಂದ ನಿದ್ರೆಯ ಗುಣಮಟ್ಟ ಹಾಳಾಗುತ್ತದೆ. ಡಿಜಿಟಲ್ ಡಿಟಾಕ್ಸ್ ನಿದ್ರೆಯನ್ನು ಸುಧಾರಿಸುತ್ತದೆ.

ಫೋನ್‌ ಹಾಗೂ ಜಾಲತಾಣಗಳಲ್ಲಿ ಕಾಲಕಳೆಯುತ್ತ ನಾವು ಅಸಲಿ ಪ್ರಪಂಚವನ್ನೇ ಮರೆತುಬಿಡುತ್ತೇವೆ. ಆದರೆ ಫೋನ್‌ನಿಂದ ಕೆಲಕಾಲ ದೂರವಿರುವುದು ನಮ್ಮ ಸುತ್ತಲಿನ ಜನರು ಮತ್ತು ಪರಿಸರದೊಂದಿಗಿನ ಸಂಪರ್ಕವನ್ನು ಬಲಪಡಿಸುತ್ತದೆ.

ಡಿಜಿಟಲ್‌ ಡಿಟಾಕ್ಸ್‌ ಟ್ರೈ ಮಾಡಲು ಬಯಸಿದರೆ ಕೆಲವು ಸರಳ ಟಿಪ್ಸ್‌ ಅನುಸರಿಸಿ. ಫೋನ್ ಅನ್ನು ನಿಗದಿತ ಸಮಯದಲ್ಲಿ ದೂರವಿಡಲು ಆರಂಭಿಸಿ. ಉದಾಹರಣೆಗೆ ರಾತ್ರಿ ಅಥವಾ ಊಟದ ಸಮಯದಲ್ಲಿ ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿ ಇರಿಸಿ.

ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಫೋನ್ ಅನ್ನು ದೂರವಿಡಿ. ಅಗತ್ಯವಿಲ್ಲದ ಮತ್ತು ಹೆಚ್ಚು ಬಳಸದ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿಬಿಡಿ. ಡಿಜಿಟಲ್ ಡಿಟಾಕ್ಸ್‌ಗೂ ಮುನ್ನ ಕುಟುಂಬದವರು ಮತ್ತು ಸ್ನೇಹಿತರಿಗೆ ತಿಳಿಸಿ. ಶಾಂತವಾದ ಸ್ಥಳಕ್ಕೆ ಹೋಗಿ ಮತ್ತು ಪ್ರಕೃತಿಯನ್ನು ಆನಂದಿಸಿ. ಪುಸ್ತಕಗಳನ್ನು ಓದಿ ಅಥವಾ ಹೊಸ ಹವ್ಯಾಸವನ್ನು ಅಳವಡಿಸಿಕೊಳ್ಳಿ.

ಡಿಜಿಟಲ್ ಡಿಟಾಕ್ಸ್ ಎಂದರೆ ಫೋನ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದಲ್ಲ. ಆದರೆ ಡಿಜಿಟಲ್ ಪ್ರಪಂಚದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು. ಈ ಮೂಲಕ ಜೀವನದ ಮೇಲೆ ಹಿಡಿತ ಸಾಧಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...