ಹೈದರಾಬಾದ್: ಪುಷ್ಪ-2 ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್ ನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಬಂಧನಕ್ಕಿಡಾಗಿ ಜೈಲು ಸೇರಿದ್ದರು. ತೆಲಂಗಾಣ ಹೈಕೋರ್ಟ್ ಮದ್ಯಂತರ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಆಗಮಿಸಿದ್ದಾರೆ.
ಜುಬಿಲಿ ಹಿಲ್ಸ್ ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿರುವ ನಟ ಅಲ್ಲು ಅರ್ಜುನ್, ಪತ್ನಿ ಹಾಗೂ ಮಕ್ಕಳನ್ನು ತಬ್ಬಿ ಭಾವುಕರಾದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಲ್ಲು ಅರ್ಜುನ್, ನನಗೆ ಬೆಂಬಲ ನೀಡಿದ ಎಲ್ಲರಿಗೂ, ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು ಎಂದರು.
ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಕ್ಷೇಮವಾಗಿದ್ದೇನೆ. ನಾನು ಕಾನೂನು ಪಾಲಿಸುವ ನಾಗರಿಕ. ಎಲ್ಲದಕ್ಕೂ ನಾನು ಸಹಕರಿಸುತ್ತೇನೆ. ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ನಾನು ಮತ್ತೊಮೆ ಸಂತಾಪ ಸೂಚಿಸುತ್ತೇನೆ. ಅದೊಂದು ದುರದೃಷ್ಟಕರ ಘಟನೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇವೆ ಎಂದು ತಿಳಿಸಿದರು.