ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಭರ್ಜರಿ ಯಶಸ್ಸು ಕಂಡಿದ್ಧು, ಪುಷ್ಪ ಎರಡನೇ ಭಾಗದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ 1985ರಲ್ಲಿ ತೆರೆಕಂಡ ‘ವಿಜೇತ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ತಮ್ಮ ಸಿನಿಪಯಣ ಆರಂಭಿಸಿದರು. ಇವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಗಂಗೋತ್ರಿ’ ನಂತರ 2004ರಲ್ಲಿ ಸುಕುಮಾರ್ ನಿರ್ದೇಶನದ ಮೂಡಿಬಂದ ‘ಆರ್ಯ’ ಚಿತ್ರದ ಮೂಲಕ ಅಲ್ಲು ಅರ್ಜುನ್ ಸ್ಟಾರ್ ನಟನಾಗಿ ಹೊರಹೊಮ್ಮಿದರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಅಲ್ಲು ಅರ್ಜುನ್ ಗೆ ಕರ್ನಾಟಕದಲ್ಲೂ ಅಭಿಮಾನಿಗಳ ದಂಡೇ ಇದೆ.
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಅಲ್ಲು ಅರ್ಜುನ್ 17 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ದಕ್ಷಿಣ ಭಾರತದಲ್ಲೇ ಇನ್ಸ್ಟಾಗ್ರಾಮ್ ನಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಪುಷ್ಪ’ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.