ಕೋವಿಡ್ ಲಸಿಕೆ ಕಡ್ಡಾಯ ವಿಷಯದಲ್ಲಿ ಸರ್ಕಾರ ಹೊರಡಿಸಿದ ಆದೇಶಗಳಿಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಎರಡು ಡೋಸ್ ಲಸಿಕೆ ಹಾಕದ ವ್ಯಕ್ತಿಗಳ ಮೇಲೆ ನಿರ್ಬಂಧ ಹೇರಿದ್ದ ಮಹಾರಾಷ್ಟ್ರ ಸರ್ಕಾರದ ಕೆಲವು ಆದೇಶಗಳು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜುಲೈ 15, ಆಗಸ್ಟ್ 10 ಮತ್ತು ಆಗಸ್ಟ್ 11, 2021 ರಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಆದೇಶಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ತನ್ನ ಅಭಿಪ್ರಾಯ ನೀಡಿತು.
ಈ ವೇಳೆ ಸರ್ಕಾರದ ಪರ ವಕೀಲ ಅನಿಲ್ ಅಂತೂರಕರ್ ಅವರು ಆದೇಶಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯದಲ್ಲಿ ನಡೆದ ಚರ್ಚೆಗಳು ಮತ್ತು ಕೋವಿಡ್ ಸಾಂಕ್ರಾಮಿಕದ ಸ್ಥಿತಿ ಮತ್ತು ಕೋವಿಡ್ ಕಾರ್ಯಪಡೆಯ ಸಲಹೆಗಳ ಸೂಚನೆ ಅನುಸಾರ ನೀಡಿದ ಆದೇಶಗಳನ್ನು ಪರಿಶೀಲಿಸಲು ರಾಜ್ಯ ಕಾರ್ಯಪಡೆ ಸಭೆ ಸೇರಲಿದೆ ಎಂದು ಕೋರ್ಟ್‌ಗೆ ವಿವರಿಸಿದರು.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂಎಸ್ ಕಾರ್ಣಿಕ್ ಅವರ ಪೀಠವು, ನಿರ್ಬಂಧ ತೆಗೆದುಹಾಕುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೊದಲು ಕಾರ್ಯಪಡೆಯು ರಾಜ್ಯದಲ್ಲಿನ ಅಂಕಿಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುಬೇಕಾಗುತ್ತದೆ ಎಂದು ಹೇಳಿತು.
ಈ ಹಿಂದೆ ಕಾರ್ಯಪಡೆ ಅಧ್ಯಕ್ಷರು ಕಾನೂನುಬಾಹಿರ ಆದೇಶಗಳನ್ನು ಜಾರಿಗೊಳಿಸಿದ್ದಾರೆ ಎಂದು ಪೀಠವು ಆದೇಶದಲ್ಲಿ ಪ್ರಸ್ತಾಪಿಸಿದೆ.
ಲಸಿಕೆ ಹಾಕದ ವ್ಯಕ್ತಿಗಳ ಮೇಲಿನ ನಿರ್ಬಂಧದ ಆದೇಶ ಇನ್ನೂ ಜಾರಿಯಲ್ಲಿರುವ ಬಗ್ಗೆ ಫೆಬ್ರವರಿ 25ರಂದು ನಡೆಯುವ ಕಾರ್ಯಪಡೆ ಸಭೆಯಲ್ಲಿ ಪರಿಶೀಲಿಸುತ್ತದೆ ಎಂದು ಸರ್ಕಾರದ ಪರ ವಕೀಲರು ಭರವಸೆ ನೀಡಿದರು.