ಬೆಂಗಳೂರು: ಎಂಟೂವರೆ ತಿಂಗಳ ಗರ್ಭಿಣಿ ವಕೀಲೆಗೆ ನವೆಂಬರ್ 18, 19ರಂದು ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಯನ್ನು ತವರಿನಲ್ಲಿಯೇ ಬರೆಯಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ ವಕೀಲರಾದ ನೇತ್ರಾವತಿ ಪರೀಕ್ಷಾ ಕೇಂದ್ರವಾದ ಬೆಂಗಳೂರಿಗೆ ಬಂದು ಪರೀಕ್ಷೆ ಬರೆಯಬೇಕಿತ್ತು. ನೇತ್ರಾವತಿ ಅವರು ತುಂಬು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ನೇತ್ರಾವತಿ ಅವರು ಪರೀಕ್ಷೆ ಬರೆಯುವ ಕೇಂದ್ರದಲ್ಲಿ ಮಹಿಳಾ ನ್ಯಾಯಾಂಗ ಅಧಿಕಾರಿಯನ್ನು ಮೇಲ್ವಿಚಾರಕರಾಗಿ ನಿಯೋಜಿಸಬೇಕು. ತುರ್ತು ಪರಿಸ್ಥಿತಿ ಎದುರಾದರೆ ಎಲ್ಲಾ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಮಂಗಳೂರಿನ ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದಲ್ಲಿ ಖಾಲಿ ಇರುವ 57 ಸಿಬಿಲ್ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ 2023ರ ಮಾರ್ಚ್ 9 ರಂದು ಹೈಕೋರ್ಟ್ ಅಧಿಸೂಚನೆ ಹೊರಡಿಸಿದ್ದು, ಜುಲೈ 27 ರಂದು ಪ್ರಾಥಮಿಕ ಪರೀಕ್ಷೆ ನಡೆಸಲಾಗಿತ್ತು. ನೇತ್ರಾವತಿ ಸೇರಿದಂತೆ 1,022 ಅಭ್ಯರ್ಥಿಗಳು ಪಾಸಾಗಿದ್ದಾರೆ. ನವೆಂಬರ್ 18, 19ರಂದು ಬೆಂಗಳೂರಿನಲ್ಲಿ ಮುಖ್ಯ ಪರೀಕ್ಷೆ ನಿಗದಿಯಾಗಿದೆ.
ತಾವು ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದು ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿರುವ ಕಾರಣ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಕಷ್ಟವಾಗಿದೆ. ಹೀಗಾಗಿ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಲಿಖಿತ ಮನವಿ ಸಲ್ಲಿಸಿದ್ದರು. ಹಿರಿಯ ನ್ಯಾಯಮೂರ್ತಿ ಪಿ.ಎಸ್. ದಿಣೇಶ್ ಕುಮಾರ್ ಅವರ ನೇತೃತ್ವದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರೊಂದಿಗೆ ಸಮಾಲೋಚನೆ ನಡೆಸಿ ನೇತ್ರಾವತಿಯವರಿಗೆ ಮಂಗಳೂರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಹೈಕೋರ್ಟ್ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅಭ್ಯರ್ಥಿಯೊಬ್ಬರಿಗೆ ತಾವಿರುವ ಊರಿನಲ್ಲಿಯೇ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ ಎಂದು ರಿಜಿಸ್ಟರ್ ಜನರಲ್ ಕೆ.ಎಸ್. ಭರತ್ ಕುಮಾರ್ ಹೇಳಿದ್ದಾರೆ.