ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿತರಾಗಿದ್ದ ಶಿಕ್ಷಕರಿಗೆ ಮೂರು ತಿಂಗಳು ಕಳೆದರೂ ಸರ್ಕಾರದಿಂದ ಸಮರ್ಪಕ ಗೌರವಧನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ ಸರ್ಕಾರ 50,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜಿಸಿತ್ತು. ಬೆಂಗಳೂರಿನಲ್ಲಿ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆಗೆ 8000ಕ್ಕೂ ಅಧಿಕ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಸುಮಾರು 20 ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಬ್ಲಾಕ್ ಚುನಾವಣಾ ಅಧಿಕಾರಿಗಳಾಗಿ ನಿಯೋಜಿಸಲಾಗಿತ್ತು. ಹೀಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ.
ರಜಾದಿನ ಸೇರಿದಂತೆ ನಿರಂತರ ಮೂರು ತಿಂಗಳ ಕಾಲ ತಮ್ಮ ಬ್ಲಾಕ್ ಗಳ ಪ್ರತಿಯೊಂದು ಊರುಗಳ ಮನೆ ಮನೆಗೆ ತೆರಳಿ ಅರ್ಹ ವಯೋಮಿತಿ ದಾಟಿದ ಹೊಸ ಮತದಾರರ ಪಟ್ಟಿ ಸೇರ್ಪಡೆ, ಮೃತಪಟ್ಟ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವುದು, ಹಿಂದೆ ನೀಡಿದ್ದ ವಿಳಾಸದಲ್ಲಿ ಇಲ್ಲದವರನ್ನು ಪಟ್ಟಿಯಿಂದ ತೆಗೆಯುವುದು, ಹೊಸಬರ ಸೇರ್ಪಡೆ ಹೀಗೆ ಪರಿಷ್ಕರಣಾ ಕಾರ್ಯ ನಡೆಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡು ಮೂರು ತಿಂಗಳಾದರೂ ತಮಗೆ ನಿಗದಿಯಂತೆ ಗೌರವ ಧನ ನೀಡಿಲ್ಲವೆಂದು ಶಿಕ್ಷಕರು ದೂರಿದ್ದಾರೆ.