ಬೆಂಗಳೂರು: ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇರೆಗೆ ವಿದೇಶಿ ಕಂಪನಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸ್ವಿಡ್ಜರ್ ಲೆಂಡ್ ನ ಜ್ಯೂರಿಚ್ ನಲ್ಲಿರುವ ಸ್ವಿಸ್ ರೀ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನಿರ್ದೇಶಕ ಮತ್ತು ನಿಯಂತ್ರಣ ಮುಖ್ಯಸ್ಥ ಸೇರಿ ಇತರೆ 10 ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ 7ನೇ ಆರೋಪಿ ನೋಯಲ್ ಡಿಸೋಜಾ ಎಂಬುವರ ವಿರುದ್ಧ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದು, ಅವರು ವಿಚಾರಣೆ ಎದುರಿಸಬೇಕಿದೆ.
ಲೈಂಗಿಕ ಕಿರುಕುಳ ಆರೋಪ ಪ್ರಕರಣ ರದ್ದು ಮಾಡುವಂತೆ ಕೋರಿ ಸಂಸ್ಥೆಯ ನಿರ್ದೇಶಕ ಎಂ.ಎಸ್. ಸಬಿನೆ ಬೇಚ್ಲರ್ ಮೊದಲಾದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಪ್ರಕರಣದ ಸಂಬಂಧ ದಾಖಲಾದ ದೂರನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಎಲ್ಲಾ ಆರೋಪಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ದೂರು ದಾಖಲಾಗಿದೆ ಎಂಬ ಅಂಶ ಸ್ಪಷ್ಟವಾಗಲಿದೆ ಎಂದು ನ್ಯಾಯಪೀಠದ ಆದೇಶದಲ್ಲಿ ತಿಳಿಸಲಾಗಿದೆ.