ಲಖ್ನೋ: ಮಹಿಳೆ ಭಯ ಅಥವಾ ತಪ್ಪು ಕಲ್ಪನೆಯಲ್ಲಿದ್ದಾಗ ಆಕೆಯ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಪರ್ಕವೂ ಅತ್ಯಾಚಾರವಾಗಲಿದೆ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದಾಖಲಿಸಿದ್ದ ಪ್ರಕರಣ ರದ್ದು ಮಾಡುವಂತೆ ಕೋರಿ ರಾಘವ ಕುಮಾರ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನೀಸ್ ಕುಮಾರ್ ಗುಪ್ತಾ ವಜಾ ಮಾಡಿದ್ದಾರೆ.
ಆಗ್ರಾ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ರದ್ದು ಮಾಡುವಂತೆ ಕೋರಿ ಆರೋಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಮಹಿಳೆಯ ಪ್ರಜ್ಞೆ ತಪ್ಪಿಸಿ ಲೈಂಗಿಕ ಸಂಪರ್ಕ ನಡೆಸಿದ್ದ ಆರೋಪಿ ನಂತರ ಮದುವೆಯಾಗುವುದಾಗಿ ಹೇಳಿ ಶೋಷಣೆ ಮಾಡಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿದಾರ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ವಂಚನೆ ಬೆದರಿಕೆ ಮೂಲಕ ಸಂಬಂಧ ಬೆಳೆಸಿದ ಕಾರಣ ಅತ್ಯಾಚಾರದ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮಹಿಳೆ ಭಯ ಅಥವಾ ತಪ್ಪು ಕಲ್ಪನೆಯಲ್ಲಿದ್ದಾಗ ಆಕೆಯ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಪರ್ಕವೂ ಅತ್ಯಾಚಾರ ವಾಗಲಿದೆ ಎಂದು ನ್ಯಾಯಮೂರ್ತಿ ಅನೀಸ್ ಕುಮಾರ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.