ಮಾನವೀಯ ನಡೆಯೊಂದರಲ್ಲಿ ಭಾರತೀಯ ತಾಂತ್ರಿಕ ವಿದ್ಯಾಸಂಸ್ಥೆ (ಐಐಟಿ) ಒಂದರಲ್ಲಿ ಸೀಟು ಸಿಕ್ಕರೂ ಶುಲ್ಕ ಪಾವತಿ ಮಾಡಲಾರದೇ ಪರದಾಡುತ್ತಿದ್ದ ದಲಿತ ವಿದ್ಯಾರ್ಥಿನಿಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ 15,000 ರೂ.ಗಳನ್ನು ನೀಡಿದೆ.
ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಸುಧಾರಿತ ಹಂತದಲ್ಲಿ ಪಾಸಾಗಿ ಐಐಟಿ (ಬನಾರಸ್ ಹಿಂದೂ ವಿವಿ) ಪ್ರವೇಶಕ್ಕೆ ಅರ್ಹನಾಗಿದ್ದ ಈ ವಿದ್ಯಾರ್ಥಿನಿಗೆ, ಗಣಿತ ಹಾಗೂ ಕಂಪ್ಯೂಟಿಂಗ್ ಕೋರ್ಸ್ (ಪದವಿ ಹಾಗೂ ಸ್ನಾತಕೋತ್ತರ, ದ್ವಿಪದವಿ ಕೋರ್ಸ್) ಸೇರಲು ಈ ದುಡ್ಡಿನಿಂದ ಅನುಕೂಲವಾಗಿದೆ. ಇದೇ ವೇಳೆ, ಸದ್ಯದ ಮಟ್ಟಿಗೆ ಯಾವುದೇ ಸೀಟು ಇಲ್ಲದೇ ಇದ್ದರೂ ಸಹ ದಲಿತ ವಿದ್ಯಾರ್ಥಿನಿಗೊಂದು ಸೀಟ್ ಸೃಷ್ಟಿಸಲು ಬಿಎಚ್‌ಯುಗೆ ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ, ಮೂರು ದಿನಗಳ ಒಳಗೆ ಬಿಎಚ್‌ಯುಗೆ ಹೋಗಿ ವರದಿ ಮಾಡಿಕೊಳ್ಳಲು ವಿದ್ಯಾರ್ಥಿನಿಗೆ ತಿಳಿಸಿದ ಹೈಕೋರ್ಟ್, ಆಕೆಯೊಂದಿಗೆ ಅಗತ್ಯವಾದ ದಾಖಲೆಗಳನ್ನು ಕೊಂಡೊಯ್ಯಲು ಸೂಚಿಸಿದೆ.
ನ್ಯಾಯಾಧೀಶ ದಿನೇಶ್ ಕುಮಾರ್ ಸಿಂಗ್ ನೇತೃತ್ವದ ಹೈಕೋರ್ಟ್ ಪೀಠವು ಸಂಸ್ಕೃತಿ ರಂಜನ್ ಹೆಸರಿನ ಈ ವಿದ್ಯಾರ್ಥಿನಿ ವೈಯಕ್ತಿಕವಾಗಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿ ಆದೇಶ ನೀಡಿದೆ. ಜಂಟಿ ಸೀಟು ವಿತರಣಾ ಪ್ರಾಧಿಕಾರ ಹಾಗೂ ಐಐಟಿ (ಬಿಎಚ್‌ಯು) ತನಗೆ ಶುಲ್ಕ ಪಾವತಿ ಮಾಡಲು ಸಮಯಾವಕಾಶ ನೀಡಿ, 15,000ರೂಪಾಯಿ ಹೊಂದಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಸಂಸ್ಕೃತಿ. ತನ್ನ ತಂದೆಗೆ ಕಿಡ್ನಿ ವೈಫಲ್ಯದ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕಾರಣದಿಂದಾಗಿ ಹಾಗೂ 15,000 ರೂ.ಗಳನ್ನು ಹೊಂದಿಸಲು ತನಗೆ ಆಗುತ್ತಿಲ್ಲವೆಂದು ಈ ವಿದ್ಯಾರ್ಥಿನಿ ಕೋರ್ಟ್ ಮುಂದೆ ಭಿನ್ನವಿಸಿಕೊಂಡಿದ್ದರು.
ಎಸ್‌ಸಿ ಕೆಟಗರಿಯಿಂದ ಪರೀಕ್ಷೆ ತೆಗೆದುಕೊಂಡಿದ್ದ ಸಂಸ್ಕೃತಿ, ಹತ್ತನೇ ತರಗತಿಯಲ್ಲಿ 95.6% ಹಾಗೂ 12ನೇ ತರಗತಿಯಲ್ಲಿ 94% ಅಂಕಗಳಿಸಿ ತೇರ್ಗಡೆಯಾಗಿದ್ದಾರೆ. ಜೆಇಇ ಪ್ರಧಾನ ಪರೀಕ್ಷೆಯಲ್ಲಿ 92.77% ಅಂಕಗಳಿಸಿರುವ ಸಂಸ್ಕೃತಿ, ಎಸ್‌ಸಿ ಅಭ್ಯರ್ಥಿಯಾಗಿ 2,062ನೇ ರ‍್ಯಾಂಕ್ ಪಡೆದಿದ್ದಾರೆ. ಇದಾದ ಬಳಿಕ ಜೆಇಇನ ಮುಂದಿನ ಹಂತದ ಪರೀಕ್ಷೆ ತೆಗೆದುಕೊಂಡ ಈಕೆ, ಇದೇ ಕೆಟಗರಿಯಲ್ಲಿ 1,469ನೇ ರ‍್ಯಾಂಕ್ ಪಡೆದಿದ್ದರು.
ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರು ಕಾಲೇಜಿನ ಶುಲ್ಕ ಪಾವತಿ ಮಾಡಲು ಸಮಯಾವಕಾಶ ಕೋರಿದ್ದನ್ನು ಕಂಡು ಸ್ಪಂದಿಸಿದ ಹೈಕೋರ್ಟ್, ತನ್ನದೇ ಸಾಮಥ್ಯದಲ್ಲಿ 15,000 ರೂ.ಗಳನ್ನು ಆಕೆಗೆ ನೀಡಲು ಮುಂದಾಗಿದೆ.