ಲಖ್ನೋ: ಅಯೋಧ್ಯೆ ಮಸೀದಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಜಮೀನಿನ ಮಾಲೀಕತ್ವ ಕೋರಿ ದೆಹಲಿ ಮೂಲದ ಸಹೋದರಿಯರಾದ ರಾಣಿ ಕಪೂರ್, ರಮಾರಾಣಿ ಎಂಬುವರು ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮಸೀದಿ ನಿರ್ಮಾಣ ಮಾಡಲು ನೀಡಿರುವ ನಿವೇಶನದ ಮಾಲೀಕತ್ವ ತಮಗೆ ಸೇರಿದೆ ಎಂದು ಅವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಮಸೀದಿ ನಿರ್ಮಾಣಕ್ಕೆ ಮಂಜೂರು ಮಾಡಲಾದ ಜಮೀನಿನ ಸಂಖ್ಯೆ ಮತ್ತು ಅರ್ಜಿಯಲ್ಲಿ ತಿಳಿಸಲಾಗಿರುವ ಜಮೀನಿನ ಸಂಖ್ಯೆ ಬೇರೆ ಬೇರೆಯಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ರಮೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಆಗ ನ್ಯಾಯಮೂರ್ತಿಗಳಾದ ಡಿ.ಕೆ. ಉಪಾಧ್ಯಾಯ ಮತ್ತು ಮನೀಶ್ ಕುಮಾರ್ ಅವರ ಪೀಠ, ಅರ್ಜಿದಾರರ ಪರ ವಕೀಲರು ಸತ್ಯವನ್ನು ತಿಳಿದುಕೊಳ್ಳದೆ ಅವಸರದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಮಸೀದಿ ನಿರ್ಮಾಣಕ್ಕೆ ನೀಡಿದ ಜಮೀನಿನ ಮಾಲೀಕತ್ವ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ ಎಂದು ಹೇಳಲಾಗಿದೆ.