ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಸದಸ್ಯರು ತಮ್ಮ ಮುಷ್ಕರವನ್ನು ಮುಂದುವರೆಸಿರುವ ಕಾರಣ ಇನ್ನು ಮುಂದೆ ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಸಂಬೋಧಿಸದಿರಲು ನಿರ್ಧರಿಸಿದ್ದಾರೆ.
ಅಲಹಾಬಾದ್‌ನಲ್ಲಿ ನಡೆದ ಸಂಘದ ಸಭೆಯಲ್ಲಿ, ನ್ಯಾಯಾಧೀಶರನ್ನು ದೇವರಂತೆ ಪರಿಗಣಿಸಬಾರದು ಮತ್ತು ಮೇಲಿನ ಸಂಬೋಧನೆಗಳು ಅವರಿಗೆ ಸೂಕ್ತವಲ್ಲ ಎಂದು ಸದಸ್ಯರು ಅಭಿಪ್ರಾಯಪಟ್ಟರು. ಈ ನಿರ್ಧಾರವು ಭಾರತದ ಮುಖ್ಯ ನ್ಯಾಯಾಧೀಶರು ಪ್ರತಿಧ್ವನಿಸಿದ ಇದೇ ರೀತಿಯ ಭಾವನೆಯನ್ನು ಸಹ ಉಲ್ಲೇಖಿಸುತ್ತದೆ.
ಈ ವರ್ಷದ ಜೂನ್‌ನಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಾಲಯಗಳನ್ನು ದೇವಾಲಯಗಳು ಮತ್ತು ನ್ಯಾಯಾಧೀಶರನ್ನು ದೇವರು ಎಂದು ಭಾವಿಸುವುದು ಅಪಾಯಕಾರಿ ಎಂದು ಹೇಳಿದ್ದರು.
ಅಸೋಸಿಯೇಷನ್‌ನ ಹಿರಿಯ ಉಪಾಧ್ಯಕ್ಷ ರಾಜೇಶ್ ಖರೆ ಮಾತನಾಡಿ, ಪ್ರಸ್ತುತ ಸಂಬೋಧನೆಯು ‘ವಸಾಹತುಶಾಹಿ ಯುಗದ ಎಂಜಲು’. ನ್ಯಾಯಾಧೀಶರು ಕೂಡ ಮನುಷ್ಯರೇ ಎಂದು ಹೇಳಿದ್ದಾರೆ.
ವಕೀಲರ ಮೇಲಿನ ದೌರ್ಜನ್ಯ ಮತ್ತು ಕೆಲವು ನ್ಯಾಯಾಧೀಶರ ವರ್ತನೆಯನ್ನು ವಿರೋಧಿಸಿ ನಡೆಯುತ್ತಿರುವ ವಕೀಲರ ಮುಷ್ಕರದಿಂದ ರಾಜ್ಯದಲ್ಲಿ ನ್ಯಾಯಾಂಗ ಕಾರ್ಯವು ಕುಂಠಿತವಾಗಿದೆ. ಆರಂಭದಲ್ಲಿ ಜುಲೈ 10 ಕ್ಕೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಜುಲೈ 12 ರಂದು ಸಹ ಮುಂದುವರೆದಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಕಾರ್ಯವೈಖರಿ ಬಗ್ಗೆ ವಕೀಲರ ಸಂಘ ವಿಶೇಷವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಾಧೀಶರು ಮತ್ತು ವಕೀಲರ ನಡುವಿನ ಸಂಬಂಧವು ನ್ಯಾಯದ ವಿತರಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಸೋಸಿಯೇಷನ್ ಜುಲೈ 9 ರಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಬರೆದ ಪತ್ರದಲ್ಲಿ ಗಮನಸೆಳೆದಿದೆ.
ಮುಷ್ಕರದ ಸಂದರ್ಭದಲ್ಲಿ ಖುದ್ದಾಗಿ ಅಥವಾ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವಕೀಲರು ಶೋಕಾಸ್ ನೋಟಿಸ್‌ಗೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡದಿದ್ದರೆ ಸಂಘದ ಸದಸ್ಯತ್ವದಿಂದ ಅಮಾನತುಗೊಳಿಸಲಾಗುವುದು ಎಂದು ಸಂಘವು ತಿಳಿಸಿದೆ. ಮುಷ್ಕರದ ಸಮಸ್ಯೆಯನ್ನು ಪರಿಹರಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಜುಲೈ 14 ರಂದು ರಾಜ್ಯ ಸಂಸ್ಥೆಯೊಂದಿಗೆ ವರ್ಚುವಲ್ ಸಭೆಯನ್ನು ನಿಗದಿಪಡಿಸಿದೆ.