ಬೆಂಗಳೂರು : ಆಸ್ತಿ ಖರೀದಿ, ಮಾರಾಟದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರವು ‘ಕಾವೇರಿ-2.0’ ತಂತ್ರಾಂಶವನ್ನು (Kaveri 2.0 software ) ಪರಿಚಯಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ರಾಜ್ಯಾದ್ಯಂತ ಕಾವೇರಿ-2 ತಂತ್ರಾಂಶ ಜಾರಿಯಾಗಿದ್ದು, ಈ ಮೂಲಕ ಜನರು ಆಸ್ತಿ ಖರೀದಿ ಹಾಗೂ ಮಾರಾಟ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಬಹುದಾಗಿದೆ. ಪೂರ್ವ ನೋಂದಣಿ ಪ್ರಕ್ರಿಯೆಯು ಸಂಪೂರ್ಣ ಆನ್ಲೈನ್ ಮತ್ತು ಸಂಪರ್ಕ ರಹಿತವಾಗಿರುತ್ತದೆ. ನಾಗರೀಕರು ನೋಂದಣಿ ಕಛೇರಿಗೆ ಹಾಜರಾಗುವ ಮೊದಲೇ ಎಲ್ಲಾ ನೋಂದಣಿ ಸಂಬಂಧ ಡೇಟಾವನ್ನು ತಂತ್ರಾಂಶದಲ್ಲಿ ನಮೂದಿಸಿ ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಉಪನೋಂದಣಾಧಿಕಾರಿಗಳ ಪರಿಶೀಲನೆಗೆ ಸಲ್ಲಿಸುತ್ತಾರೆ. ಪರಿಶೀಲಿಸಿದ ದಾಖಲೆಗಳನ್ನು ನಾಗರೀಕರಿಗೆ ನಿಗದಿತ ಶುಲ್ಕಗಳನ್ನು ಪಾವತಿಸಲು ಕಳುಹಿಸಲಾಗುತ್ತದೆ. ನಂತರ ನಾಗರೀಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆಗೆ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಬಹುದಾಗಿದೆ.
ನೋಂದಣಿ ಪ್ರಕ್ರಿಯೆ
ನೋಂದಣಿ ಪ್ರಕ್ರಿಯೆಯು 10 ನಿಮಿಷಗಳ ವ್ಯವಹಾರವಾಗಿರುತ್ತದೆ. ನಾಗರೀಕರು ತಮ್ಮ ಭಾವಚಿತ್ರ ಹಾಗೂ ಹೆಬ್ಬೆರಳಿನ ಗುರುತನ್ನು ಸೆರೆ ಹಿಡಿಯುವ ಸಂಬಂಧ ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಉಪನೋಂದಣಿ ಕಛೇರಿಗೆ ಭೇಟಿ ನೀಡುತ್ತಾರೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿದ ದಸ್ತಾವೇಜನ್ನು ನಾಗರೀಕರ ಲಾಗಿನ್ಗೆ ಹಾಗೂ ಅವರ ಡಿಜಿಲಾಕರ್ ಖಾತೆಗೆ ಕಳುಹಿಸಲಾಗುತ್ತದೆ. ನೋಂದಾಯಿತ ದಸ್ತಾವೇಜಿನ ಮಾಹಿತಿಯನ್ನು ಸಂಬಂಧಪಟ್ಟ ಸಂಯೋಜಿತ ಇಲಾಖೆಗೆ ಖಾತಾ ಬದಲಾವಣೆಗಾಗಿ ಕಳುಹಿಸಲಾಗುತ್ತದೆ.
ಕಾವೇರಿ-2 ತಂತ್ರಾಂಶದ ಅನುಕೂಲತೆಗಳು
ಸಾರ್ವಜನಿಕರು. ದಸ್ತಾವೇಜಿನ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಿ ಶುಲ್ಕಗಳನ್ನು ಪಾವತಿಸಿ, ಅವರ ಆಯ್ಕೆಯ ಉಪನೋಂದಣಿ ಕಛೇರಿಯಲ್ಲಿ ದಸ್ತಾವೇಜಿನ ನೋಂದಣಿಗಾಗಿ ಸಮಯ ನಿಗದಿಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ದಸ್ತಾವೇಜಿನ ನೋಂದಣಿಗಾಗಿ ಉಪನೋಂದಣಿ ಕಛೇರಿಯಲ್ಲಿ ಕಾಯುವಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ದಸ್ತಾವೇಜಿನ ನೋಂದಣಿ ಸಮಯದಲ್ಲಿ ಆಗುವ ಡೇಟಾ ಎಂಟ್ರಿ ತಪ್ಪುಗಳು ಕಡಿಮೆಯಾಗುತ್ತದೆ.