ಆಗಾಗ ರಕ್ತದಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ನಿಮಗೆ ಗೊತ್ತಿದೆಯೇ ? ರಕ್ತದಾನ ಮಾಡುವ ವ್ಯಕ್ತಿಯು ಬೇರೊಂದು ಜೀವಕ್ಕೆ ನೆರವಾಗುವುದಲ್ಲದೇ ಖುದ್ದು ತನ್ನದೇ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ. ಅವುಗಳ ಪಟ್ಟಿ ಇಂತಿದೆ:
1. ಉಚಿತ ಆರೋಗ್ಯ ಸ್ಕ್ರೀನಿಂಗ್
ರಕ್ತದಾನ ಮಾಡುವ ಮುನ್ನ ನಿಮ್ಮ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿಗಳನ್ನು ಪರೀಕ್ಷಿಸಲಾಗುತ್ತದೆ. ರೆಡ್ ಕ್ರಾಸ್ ಕೇಂದ್ರಗಳು ಈ ಮುಖ್ಯವಾದ ಮಾಹಿತಿಗಳನ್ನು ರಕ್ತದಾನಿಯ ಪ್ರೊಫೈಲ್‌ನಲ್ಲಿ ದಾಖಲಿಸಿ ಇಡುತ್ತವೆ. ನಿಮ್ಮ ಆರೋಗ್ಯದ ಮಟ್ಟವನ್ನು ಪರಿಶೀಲನೆ ಮಾಡಲು ಕಾಲಕಾಲಿಕವಾಗಿ ರಕ್ತದ ಪರೀಕ್ಷೆ ಮಾಡುತ್ತಲೇ ಇರಬೇಕು.
2. ನಿಮ್ಮ ಆರೋಗ್ಯ ಮಾಹಿತಿ ಆನ್ಲೈನ್‌ನಲ್ಲಿ
ಈ ಹಿಂದೆ ರಕ್ತದಾನ ಮಾಡಿದಾಗ ಅಥವಾ ಯಾವುದೇ ಸಂದರ್ಭದಲ್ಲೂ ರಕ್ತದಾನ ಮಾಡಿದ್ದಲ್ಲಿ ನಿಮ್ಮ ಆರೋಗ್ಯ ಸಂಬಂಧಿ ಮಾಹಿತಿ ಆನ್ಲೈನ್‌ನಲ್ಲಿ ಸೇವ್ ಮಾಡುವ ಮೂಲಕ ನಿಮಗೆ ಬೇಕಾದಾಗ ಈ ಮಾಹಿತಿಯನ್ನು ಪಡೆಯಬಹುದಾಗಿದೆ.
3. ಮತ್ತೊಬ್ಬರ ಜೀವ ಉಳಿಸಿ
ನೀವು ಕೊಟ್ಟ ರಕ್ತವನ್ನು ಸಂಸ್ಕರಿಸಿ ಇಟ್ಟು, ಪ್ರತ್ಯೇಕ ಘಟಕಗಳನ್ನಾಗಿ ವಿಭಜಿಸಲಾಗುತ್ತದೆ: ಕೆಂಪು ರಕ್ತ ಕಣಗಳು, ಪ್ಲೇಟ್‌ಲೆಟ್‌ಗಳು ಮತ್ತು ಪ್ಲಾಸ್ಮಾ. ಆಸ್ಪತ್ರೆಗಳಲ್ಲಿ ನಿಮ್ಮ ರಕ್ತವು ಅದರ ಅಗತ್ಯವಿರುವ ರೋಗಿಗೆ ನೀಡಬಹುದಾಗಿದೆ. ನಿಮ್ಮ ಸಮಯ ಹಾಗೂ ರಕ್ತವನ್ನು ಅಗತ್ಯವಿದ್ದ ಮಂದಿಗೆ ಕೊಡುತ್ತಿದ್ದೀರಿ ಎಂದು ಅರಿತಾಗ ನಿಮಗೆ ಒಂದು ರೀತಿಯ ಧನ್ಯತಾಭಾವ ಮೂಡುತ್ತದೆ.
4. ಅಧಿಕ ಕಬ್ಬಿಣಾಂಶ ಸಂಗ್ರಹಕ್ಕೆ ಕಡಿವಾಣ
ನಿಮ್ಮ ದೇಹದಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದಲ್ಲಿ, ಅದನ್ನು ಸೂಕ್ತ ಮಟ್ಟಕ್ಕೆ ತರಲು ರಕ್ತದಾನ ನೆರವಾಗುತ್ತದೆ. ಇದರಿಂದ ಹೃದ್ರೋಗದ ಸಾಧ್ಯತೆಗಳು ಕಡಿಮೆಯಾಗುತ್ತವೆ. ಕೆಲವೊಂದು ಮಂದಿಗೆ ಕಬ್ಬಿಣದ ಅಧಿಕ ಸಂಗ್ರಹದಿಂದಾಗಿ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿರುತ್ತದೆ. ಇಂಥ ಸಂದರ್ಭದಲ್ಲಿ, ನಿಮ್ಮ ರಕ್ತವನ್ನು ದಾನ ಮಾಡುವುದರಿಂದ, ಹೊಸದಾಗಿ ರಕ್ತ ಉತ್ಪತ್ತಿಯಾಗಿ, ಅಧಿಕ ಕಬ್ಬಿಣದಂಶವನ್ನು ತಗ್ಗಿಸಬಹುದಾಗಿದೆ.
5. ಕ್ಯಾನ್ಸರ್ ಮತ್ತು ಹೃದ್ರೋಗದ ರಿಸ್ಕ್ ತಗ್ಗಿಸಿ
ಇತ್ತೀಚಿನ ಸಂಶೋಧನೆ ಪ್ರಕಾರ, ರಕ್ತದಲ್ಲಿ ಕಬ್ಬಿಣಾಂಶ ಅಗತ್ಯಕ್ಕಿಂತ ಕಡಿಮೆಯಾಗುತ್ತಾ ಸಾಗಿದಲ್ಲಿ ಆ ವ್ಯಕ್ತಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಆಗಾಗ ರಕ್ತದಾನ ಮಾಡುವುದು ಇಂಥ ಸಾಧ್ಯತೆಗೆ ಕಡಿವಾಣ ಹಾಕುತ್ತದೆ. ಅಲ್ಲದೇ ನಿಮ್ಮ ಮೇಲೆ ಉಂಟಾಗುವ ಸ್ಟ್ರೆಸ್ ಅನ್ನು ಸಹ ಕಡಿಮೆ ಮಾಡಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯನ್ನೂ ತಗ್ಗಿಸುತ್ತದೆ.
6. ಲಿವರ್‌ಗೂ ಪ್ರಯೋಜನವಿದೆ
ಕಬ್ಬಿಣಾಂಶದ ಅಧಿಕ ಸಂಗ್ರಹಣೆಯಿಂದ ನಿಮ್ಮ ಲಿವರ್ ಮೇಲೂ ಅಡ್ಡ ಪರಿಣಾಮ ಉಂಟಾಗಬಹುದು. “ಇತ್ತೀಚಿನ ವರ್ಷಗಳಲ್ಲಿ, ಆಲ್ಕೋಹಾಲ್ ಯೇತರ ಕಾರಣದಿಂದ ಲಿವರ್‌ನಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಾಗಿ ಬರುವ ಸೋಂಕು, ಮೆಟಾಬಾಲಿಕ್ ಸಿಂಡ್ರೋಮ್‌ನ ಹೆಪಾಟಿಕ್ ಅಭಿವ್ಯಕ್ತಿ, ತೀವ್ರವಾಗಿದೆ ಎಂದು ರಸ್ಮುಸ್ಸೆನ್ ವಿವಿಯ ಅಧ್ಯಯನ ವರದಿಯೊಂದು ತಿಳಿಸುತ್ತದೆ.
7. ತುರ್ತು ರಕ್ತದ ಅಗತ್ಯಕ್ಕಾಗಿ
ಜಗತ್ತಿನಾದ್ಯಂತ ತುರ್ತು ಸಂದರ್ಭಕ್ಕಾಗಿ ಕೂಡಿಟ್ಟಿರುವ ರಕ್ತದ ಪ್ರಮಾಣ ತೀರಾ ಕಡಿಮೆ ಇದೆ. ಕಳೆದೊಂದು ದಶಕದಲ್ಲಿ ಅಮೆರಿಕದಂಥ ದೈತ್ಯ ದೇಶಗಳೇ ರಕ್ತದ ತೀವ್ರ ಕೊರತೆ ಅನುಭವಿಸುತ್ತಿವೆ ಎಂದು ಅಮೆರಿಕನ್ ರೆಡ್ ಕ್ರಾಸ್ ಸೊಸೈಟಿ ಜಾಲತಾಣ ತಿಳಿಸಿದೆ. ಇದೇ ಪರಿಸ್ಥಿತಿ ಜಗತ್ತಿನ ಬೇರೆಡೆಗಳಲ್ಲೂ ಪ್ರತಿಫಲಿಸಿದೆ, ಅದರಲ್ಲೂ ಕೋವಿಡ್ ಸೋಂಕು ಹಬ್ಬಲು ಆರಂಭಿಸಿದ ಮಾರ್ಚ್ 2020ರಿಂದ ಇನ್ನಷ್ಟು ತೀವ್ರವಾಗಿ ರಕ್ತದ ಅಗತ್ಯ ಎದ್ದು ಕಾಣುತ್ತಿದೆ.