ನವದೆಹಲಿ: ಮಹಿಳಾ ಫುಟ್ಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅವರನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಇಂಡಿಯನ್ ವುಮೆನ್ಸ್ ಲೀಗ್ನಲ್ಲಿ ಭಾಗವಹಿಸುವ ಫುಟ್ಬಾಲ್ ತಂಡವಾದ ಖಾಡ್ ಎಫ್ಸಿಯ ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರರೊಂದಿಗೆ ದೀಪಕ್ ಹಲ್ಲೆ ಮತ್ತು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ದೂರು ದಾಖಲಾಗಿತ್ತು. ಕ್ಲಬ್ನ ಮಾಲೀಕ ದೀಪಕ್ ಮಾರ್ಚ್ 28 ರಂದು ಅವರ ಕೋಣೆಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದರು.
ಎಐಎಫ್ಎಫ್ನ ಕಾರ್ಯಕಾರಿ ಸಮಿತಿಯ ಸದಸ್ಯ ದೀಪಕ್ ಶರ್ಮಾ ವಿರುದ್ಧ ಔಪಚಾರಿಕ ದೂರನ್ನು ಸ್ವೀಕರಿಸಿದ ನಂತರ ಅವರನ್ನು ಶನಿವಾರ ವಿಚಾರಣೆಗೆ ಕರೆಯಲಾಯಿತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ(ಮಾಪುಸಾ) ಸಂದೇಶ್ ಚೋಡಂಕರ್ ಹೇಳಿದ್ದಾರೆ. ಗಾಯವನ್ನುಂಟುಮಾಡುವುದು, ಮಹಿಳೆಯ ವಿರುದ್ಧ ಬಲಪ್ರಯೋಗ ಮತ್ತು ಇತರ ಆರೋಪಗಳು ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮಾಪುಸಾ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ದೀಪಕ್ ಶರ್ಮಾ ಅವರು ಗೋವಾದಲ್ಲಿ ತಂಗಿದ್ದಾಗ ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರರ ಮೇಲೆ ಹಲ್ಲೆ ನಡೆಸಿದ್ದರು. ಹಿಮಾಚಲ ಪ್ರದೇಶ ಫುಟ್ಬಾಲ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶರ್ಮಾ ಅವರನ್ನು ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಚೋಡಂಕರ್ ವಿವರಿಸಿದರು.
ಸಂತ್ರಸ್ತರಿಗೆ ಮಾಪುಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಂಘವು ಸಹಾಯ ಮಾಡಿದೆ ಎಂದು ಜಿಎಫ್ಎ ಅಧ್ಯಕ್ಷ ಕೇಟಾನೊ ಫೆರ್ನಾಂಡಿಸ್ ಹೇಳಿದ್ದಾರೆ.