ಕೇಪ್ ಟೌನ್: ಸಿಂಹವನ್ನು ಕಾಡಿನ ರಾಜ ಅಂತಾ ಕರೆಯಲಾಗುತ್ತದೆ. ಅಲ್ಲದೆ ಇವುಗಳನ್ನು ಧೈರ್ಯ, ಅಧಿಕಾರ ಮತ್ತು ಆಜ್ಞೆಯ ಸಂಕೇತ ಅಂತಾನೇ ಪರಿಗಣಿಸಲಾಗಿದೆ. ಗುಡ್ಡದ ಮೇಲೆ ನಿಂತು ಘರ್ಜಿಸುವ ಸಿಂಹವನ್ನು ಸಿನಿಮಾಗಳಲ್ಲಷ್ಟೇ ನೋಡಿರುತ್ತೇವೆ. ಆದರೆ ಇಲ್ಲೊಂದೆಡೆ ಸಿಂಹವೊಂದರ ಫೋಟೋ ಭಾರಿ ಸುದ್ದಿಯಾಗಿದೆ.
ಬ್ರಿಟಿಷ್ ಛಾಯಾಚಿತ್ರಗಾರ ಸೆರೆ ಹಿಡಿದಿರುವ ಈ ಫೋಟೋ ಹುಬ್ಬೇರಿಸುವಂತಿದೆ. ಸೂರ್ಯೋದಯವಾಗುತ್ತಿದ್ದ ವೇಳೆ ಗಂಡು ಸಿಂಹವೊಂದು ಅಸ್ಥಿಪಂಜರಗಳಿಂದ ತುಂಬಿದ್ದ ಗುಡ್ಡದ ಮೇಲೆ ಗಾಂಭೀರ್ಯದಿಂದ ನಿಂತಿರುವ ಕ್ಷಣವನ್ನು ಸೈಮನ್ ನೀಶಮ್ ಎಂಬ ಫೋಟೋಗ್ರಾಫರ್ ಸೆರೆಹಿಡಿದಿದ್ದಾರೆ. ರಾಜನು ತನ್ನ ಪ್ರಜೆಗಳನ್ನು ಅವಲೋಕಿಸುವ ರೀತಿ ಸಿಂಹ ನಿಂತಿದೆ. ಈ ಅಪರೂಪದ ದೃಶ್ಯ ಕಂಡು ಬಂದಿದ್ದು ದಕ್ಷಿಣ ಆಫ್ರಿಕಾದ ಜಿಜಿ ಸಂರಕ್ಷಣಾ ವನ್ಯಜೀವಿ ಮೀಸಲು ಹಾಗೂ ಸಿಂಹ ಅಭಯಾರಣ್ಯದಲ್ಲಿ.
‘’ಒಂದು ದಿನ ಬೆಳಗ್ಗೆ ಫೋಟೋ ತೆಗೆಯಲೆಂದು ಹೋದಾಗ ಈ ದೃಶ್ಯ ಕಣ್ಣಿಗೆ ಬಿತ್ತು. ಸುತ್ತ ಮೂಳೆಗಳು ಬಿದ್ದಿದ್ದು ಗುಡ್ಡದ ಮೇಲೆ ನಿಂತು ತನ್ನ ಪ್ರಜೆಗಳನ್ನು ನೋಡುವ ರೀತಿಯಲ್ಲಿ ಸಿಂಹ ನಿಂತಿತ್ತು. ತಡಮಾಡದೆ ಆ ಸುಂದರ ಕ್ಷಣಗಳನ್ನು ಫೋಟೋ ಸೆರೆ ಹಿಡಿದೆ. ಸಿಂಹ ಕೇವಲ ಒಂದು ನಿಮಿಷ ಅಲ್ಲಿಯೇ ನಿಂತಿತ್ತು. ಇದೊಂದು ಬಹಳ ರೋಮಾಂಚನಕಾರಿ ಕ್ಷಣವಾಗಿತ್ತು’’ ಎಂದು ನೀಶಮ್ ಹೇಳಿದ್ದಾರೆ.