ಸಿಬ್ಬಂದಿ ಸಚಿವಾಲಯ ನೀಡಿರುವ ಸೂಚನೆಯಂತೆಯೇ ಇಂದಿನಿಂದ ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಆರಂಭಗೊಂಡಿದೆ ಬಯೋಮೆಟ್ರಿಕ್ ವ್ಯವಸ್ಥೆಯ ಪಕ್ಕದಲ್ಲಿಯೇ ಸ್ಯಾನಿಟೈಸರ್ಗಳನ್ನು ಇಡುವಂತೆ ನೋಡಿಕೊಳ್ಳುವುದು ಆಯಾ ಇಲಾಖೆಯ ಮುಖ್ಯಸ್ಥರ ಜವಾಬ್ದಾರಿಯಾಗಿದೆ.
ಬಯೋಮೆಟ್ರಿಕ್ ಬಳಕೆ ಮಾಡುವ ಮುನ್ನ ಎಲ್ಲಾ ಸಿಬ್ಬಂದಿ ತಮ್ಮ ಕೈಯಲ್ಲಿ ಸ್ಯಾನಿಟೈಸ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕೊರೊನಾ ಸೋಂಕು ಮಿತಿಮೀರಿದ ಬಳಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು.
ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯ ಹಾಗೂ ಇಲಾಖೆಗಳಿಗೆ ನೀಡಿರುವ ಆದೇಶದಲ್ಲಿ ಸಿಬ್ಬಂದಿ ಸಚಿವಾಲಯವು, ಎಲ್ಲಾ ಸಿಬ್ಬಂದಿ ಬಯೋಮೆಟ್ರಿಕ್ ವ್ಯವಸ್ಥೆ ಬಳಸುವಾಗ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಬಯೋಮೆಟ್ರಿಕ್ಗಳನ್ನೂ ಇಲಾಖೆ ಇಟ್ಟುಕೊಳ್ಳಬಹುದಾಗಿದೆ ಹೆಚ್ಚುವರಿ ಬಯೋಮೆಟ್ರಿಕ್ಗಳಿಂದ ಜನದಟ್ಟಣೆಯನ್ನು ತಪ್ಪಿಸಬಹುದು. ಬಯೋಮೆಟ್ರಿಕ್ಗೆ ಸರದಿಯಲ್ಲಿ ನಿಂತ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಸೂಚನೆ ನೀಡಿದೆ.
ಸಾರ್ವಜನಿಕ ಸಭೆ ಅನಿವಾರ್ಯವಲ್ಲದ ಸಂದರ್ಭಗಳಲ್ಲಿ ಆದಷ್ಟು ವಿಡಿಯೋ ಕಾನ್ಫರೆನ್ಸ್ ಹಾಗೂ ವೈಯಕ್ತಿಕ ಸಭೆಗಳಿಗೆ ಆದ್ಯತೆ ನೀಡತಕ್ಕದ್ದು. ಕೇಂದ್ರ ಸರ್ಕಾರಿ ನೌಕರರು ಎಲ್ಲಾ ಸಂದರ್ಭಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಆದೇಶ ಹೊರಡಿಸಲಾಗಿದೆ .