ದೆಹಲಿ: ಪ್ರೇಮಪಾಶದಲ್ಲಿ ಬಿದ್ದಂತಹ ಕೆಲವರು ತನ್ನ ಗೆಳತಿಗಾಗಿ ಏನನ್ನು ಮಾಡಲು ಕೂಡ ತಯಾರಾಗಿರುತ್ತಾರೆ. ತನ್ನ ಪ್ರಿಯತಮೆಯನ್ನು ಸುತ್ತಾಡಿಸಬೇಕು, ಫಿಲಂಗೆ ಕರೆದುಕೊಂಡು ಹೋಗ್ಬೇಕು, ಒಳ್ಳೆಯ ಮೊಬೈಲ್ ಕೊಡಿಸ್ಬೇಕು….. ಹೀಗೆ ಉದ್ದನೇ ಲಿಸ್ಟ್ ಇರುತ್ತದೆ. ಹೌದು, ಹೀಗೆ ಯೋಜಿಸಿದ್ದ ಪ್ರೇಮಿಯೊಬ್ಬ, ತನ್ನ ಗರ್ಲ್‌ಫ್ರೆಂಡ್‌ಗೆ ಉಡುಗೊರೆ ನೀಡಲು ಹೋಗಿ ಖಾಕಿ ಬಲೆಗೆ ಬಿದ್ದಿದ್ದಾನೆ.
ಅಷ್ಟಕ್ಕೂ ಏನಾಗಿದ್ದು ಅಂದ್ರೆ, ದೆಹಲಿಯಲ್ಲಿ ಪ್ರಿಯತಮನೊಬ್ಬ ತನ್ನ ಪ್ರೀತಿಯನ್ನು ತೋರ್ಪಡಿಸಲು ಗೆಳತಿಗೆ ಐಫೋನ್ ಕೊಡಲು ನಿರ್ಧರಿಸಿದ್ದಾನೆ. ಆದರೆ, ಅದನ್ನು ಖರೀದಿಸುವಷ್ಟು ದೊಡ್ಡ ಮೊತ್ತ ತನ್ನ ಬಳಿ ಇಲ್ಲದಿರುವುದರಿಂದ ಕದಿಯಲು ತೀರ್ಮಾನಿಸಿದ್ದಾನೆ. ಇದಕ್ಕಾಗಿ ಅಜಯ್ ಮತ್ತು ಕಪಿಲ್ ಶರ್ಮಾ ಎಂಬ ಇಬ್ಬರು ಕಳ್ಳರು ನವೆಂಬರ್ 23ರಂದು ಯೋಜನೆ ರೂಪಿಸಿದ್ದಾರೆ.
ಪಶ್ಚಿಮ ದೆಹಲಿಯ ಉದ್ಯಾನವನವನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಬಳಿಕ ಅವನಿಂದ ಐಫೋನ್ ಅನ್ನು ದೋಚಿದ್ದಾರೆ. ಕೂಡಲೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಐನಾತಿ ಖದೀಮರನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇದಾದ ಒಂದು ವಾರದ ನಂತರ, ಕಳ್ಳರಿರುವ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅಜಯ್ ಮತ್ತು ಕಪಿಲ್ ದ್ವಾರಕಾ ಸೆಕ್ಟರ್- 14 ರಲ್ಲಿ ಇದ್ದಾರೆ ಎಂಬ ಬಗ್ಗೆ ಗೊತ್ತಾಗಿದೆ. ತಡಮಾಡದೆ ಪೊಲೀಸರು ಕೂಡಲೇ ಇಬ್ಬರನ್ನು ಬಂಧಿಸಿ, ಐಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ತನ್ನ ಪ್ರಿಯತಮೆಗೆ ಐಫೋನ್ ಕೊಟ್ಟು ಸರ್ಪ್ರೈಸ್ ನೀಡಲು ಬಯಸಿದ್ದಾಗಿ ಕಳ್ಳ ಹೇಳಿದ್ದಾನೆ. ಅಲ್ಲದೆ ಗರ್ಲ್ ಫ್ರೆಂಡ್ ಜೊತೆ ಪ್ರವಾಸಕ್ಕೆ ಹೋಗುವುದಕ್ಕಾಗಿ, ದಾರಿಹೋಕರನ್ನು ದರೋಡೆ ಮಾಡುವ ಮೂಲಕ ಹಣ ಹೊಂದಿಸುವ ಮಾಸ್ಟರ್ ಪ್ಲಾನ್ ಬೇರೆ ರೂಪಿಸಿದ್ದನಂತೆ.
ಫೋನ್ ಮತ್ತು ದರೋಡೆಗೆ ಸಂಬಂಧಿಸಿದ ಇದೇ ರೀತಿಯ ಘಟನೆಯು ಇತ್ತೀಚೆಗೆ ಪೂರ್ವ ದೆಹಲಿಯ ಪ್ರೀತ್ ವಿಹಾರ್‌ನಲ್ಲಿ ವರದಿಯಾಗಿತ್ತು. ಜತಿನ್ ನಗರ್ ಎಂಬ 20 ವರ್ಷದ ಯುವಕ, ಉತ್ತಮ ಟಿಕ್‌ಟಾಕ್ ವಿಡಿಯೋಗಳನ್ನು ಮಾಡಲು ಬಯಸಿದ್ದರಿಂದ ಫೋನ್ ಕಳವು ಮಾಡಿದ್ದ.